ಲಖನೌ, ಜು.11 (DaijiworldNews/HR): "ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಕೊರೊನಾ ನಿರ್ವಹಣೆಯ ಲೆಕ್ಕ ಪರಿಶೋಧನೆ ನಡೆಸಲಿದ್ದೇವೆ" ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕೊರೊನಾಗೆ ಸಂಬಂಧಿಸಿದ ದತ್ತಾಂಶಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.ಬಿಜೆಪಿ ಆಡಳಿತದ ರಾಜ್ಯ ಸರ್ಕಾರವು ಕೊರೊನಾ ಅಂಕಿಅಂಶಗಳನ್ನು ಮರೆಮಾಚಿದ್ದು, ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ" ಎಂದು ಆರೋಪಿಸಿದರು.
ಇನ್ನು "ಕೊರೊನಾ ಸಾವಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಉ.ಪ್ರದೇಶ ಸರ್ಕಾರವು ನೀಡಿಲ್ಲ. ಸೋಂಕಿನಿಂದ ಮೃತಪಟ್ಟವರಿಗೆ ಯಾವುದೇ ನೆರವು ನೀಡಿಲ್ಲ. ಸರ್ಕಾರವು ಕೊರೊನಾ ಸಾವಿನ ವಿವರಗಳನ್ನು ಏಕೆ ಬಹಿರಂಗಪಡಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ.