ಪುಣೆ, ಜು 11 (DaijiworldNews/PY): "ಕೇಂದ್ರ ಸರ್ಕಾರದ ನೂತನ ಸಚಿವಾಯದಿಂದ ಮಹಾರಾಷ್ಟ್ರದಲ್ಲಿನ ಸಹಕಾರ ಚಳವಳಿಗೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ" ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಹಕಾರ ಸಚಿವಾಳಯ ಏನು ಹೊಸ ಪರಿಕಲ್ಪನೆ ಅಲ್ಲ. ಈ ಹಿಂದಿನ ಸರ್ಕಾರದಲ್ಲಿ ನಾನು ಸಚಿವನಾಗಿದ್ದ ಸಂದರ್ಭ ಸಹಕಾರ ಸಚಿವಾಲಯ ರಚಿಸಬೇಕು ಎಂದು ಚಿಂತನೆ ನಡೆದಿತ್ತು. ಆದರೆ, ಈ ಸಚಿವಾಲಯದ ಬಗ್ಗೆ ಮಾಧ್ಯಮಗಳು ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿವೆ" ಎಂದಿದ್ದಾರೆ.
"ಈ ಸಚಿವಾಲಯವು, ರಾಜ್ಯಗಳಲ್ಲಿನ ಸಹಕಾರ ವಲಯದಲ್ಲಿ ಯಾವುದೇ ರೀತಿಯಾದ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ. ಸಂವಿಧಾನದ ಪ್ರಕಾರ, ರಾಜ್ಯಗಳಲ್ಲಿ ನೋಂದಣಿಯಾಗಿರುವ ಸಹಕಾರ ಸಂಸ್ಥೆಗಳು ಆಯಾ ರಾಜ್ಯಗಳ ಆಡಳಿತದ ವ್ಯಾಪ್ತಿಗೆ ಬರುತ್ತದೆ. ಇನ್ನು ಒಂದಕ್ಕಿಂತ ಅಧಿಕ ರಾಜ್ಯಗಳಲ್ಲಿ ನೋಂದಣಿಯಾಗಿರುವ ಸಹಕಾರ ಸಂಘಗಳು ಹೊಸ ಸಹಕಾರ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ" ಎಂದು ತಿಳಿಸಿದ್ದಾರೆ.
"ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಅನುಷ್ಠಾನಕ್ಕೆ ತರಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ" ಎಂದಿದ್ದಾರೆ.