ಬೆಂಗಳೂರು, ಜು.11 (DaijiworldNews/HR): "ಕೊರೊನಾದ ಮೂರನೇ ಅಲೆಯ ನಿರ್ವಹಣೆಗೆ ಕೇಂದ್ರ ಸರಕಾರದಿಂದ ರಾಜ್ಯಕ್ಕೆ 1500 ಕೋಟಿ ರೂಪಾಯಿಗಳ ನೆರವು ದೊರೆತಿದ್ದು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯದಲ್ಲಿ ಮೂರನೇ ಅಲೆಯ ನಿರ್ವಹಣೆಗೆ ಅಗತ್ಯ ಸಿದ್ದತೆಗಳನ್ನು ನಡೆಸಲಾಗುತ್ತಿದೆ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಧಾಕರ್ ಹೇಳಿದ್ದಾರೆ.
ಈ ಕುರಿತು ಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಯುನೈಟೆಡ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕಾ ವಿತರಣೆಯ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ಅವರು, "ಯುವ ವೈದ್ಯರ ತಂಡ ಕಲಬುರಗಿಯಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ ಬೆಂಗಳೂರಿನಲ್ಲೂ ಆಸ್ಪತ್ರೆಯನ್ನು ಪ್ರಾರಂಭಿಸಿರುವುದು ಬಹಳ ಸಂತಸದ ವಿಷಯವಾಗಿದ್ದು, ಕೊರೊನಾ ಹೆಚ್ಚಾಗಿದ್ದಾಗ ರಾಜ್ಯದಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ ಉಂಟಾಗಿತ್ತು. ಆ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ನೀಡಿದ ಸಹಕಾರ ಬಹಳ ಶ್ಲಾಘನೀಯ" ಎಂದರು.
ಇನ್ನು ಕೇಂದ್ರ ಸರಕಾರ ಇತ್ತೀಚಿನ ಸಚಿವ ಸಂಫುಟ ಸಭೆಯಲ್ಲಿ ಮುಂದಿನ ಕೊರೊನಾದ ಮೂರನೇ ಅಲೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ 23 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಈ ಹಣದಲ್ಲಿ ರಾಜ್ಯಕ್ಕೆ 1500 ಕೋಟಿ ರೂಪಾಯಿಗಳ ನೆರವು ದೊರೆಯಲಿದ್ದು, ರಾಜ್ಯದಲ್ಲಿ ಮಕ್ಕಳ ವಿಭಾಗದ ಸಾಮರ್ಥ್ಯವನ್ನು ಹೆಚ್ಚಿಸಲು ಬಳಸಿಕೊಳ್ಳಲಾಗುವುದು" ಎಂದು ಹೇಳಿದ್ದಾರೆ.