ಬೆಂಗಳೂರು, ಜು 11 (DaijiworldNews/PY): "ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅವರ ನಡುವಿನ ವಾಕ್ಸಮರಕ್ಕೆ ಕಾರಣವಾಗಿರುವ ಮಂಡ್ಯ ಜಿಲ್ಲೆಯಲ್ಲಿನ ಗಣಿಗಾರಿಗೆ ಕುರಿತು ನನಗೇನು ಗೊತ್ತಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೆಲವು ದಿನ ನಾನು ಕೂಡಾ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದೆ. ಆದರೆ, ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಕುರಿತು ನನಗೆ ಮಾಹಿತಿ ಇಲ್ಲ" ಎಂದು ಸುಮಲತಾ ಅವರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
"ಕೆಆರ್ಎಸ್ ಜಲಾಶಯದಲ್ಲಿ ಬಿರುಕು ಮೂಡಿದೆ ಎನ್ನುವ ಹೇಳಿಕೆ ಜನರಲ್ಲಿ ಭೀತಿ ಮೂಡಿಸಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿಯಾದ ಹೇಳಿಕೆ ನೀಡಬಾರದು. ಈ ಬಗ್ಗೆ ಯೋಚಿಸಿ ಹೇಳಿಕೆ ನೀಡಬೇಕು" ಎಂದಿದ್ದಾರೆ.
"ಕೆಆರ್ಎಸ್ ಜಲಾಶಯದಲ್ಲಿ ಬಿರುಕು ಮೂಡಿದ್ದರೆ ಸರ್ಕಾರವಿದೆ, ನೂರಾರು ಇಂಜಿನಿಯರ್ಗಳಿದ್ದಾರೆ. ಈ ಬಗ್ಗೆ ಅವರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ಆದರೆ, ಕೆಆರ್ಎಸ್ ಜಲಾಶಯದಲ್ಲಿ ಬಿರುಕು ಮೂಡಿದೆ ಎಂದು ಸುಮಲತಾ ಅವರು ನೀಡಿರುವ ಹೇಳಿಕೆಯಿಂದ ಜನರಿಗೆ ಆತಂಕವಾಗಿದೆ" ಎಂದು ಹೇಳಿದ್ದಾರೆ.