ಶ್ರೀನಗರ, ಜು 11 (DaijiworldNews/PY): ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಜಮ್ಮು-ಕಾಶ್ಮೀರದಾದ್ಯಂತ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಇಲ್ಲಿಯರಗೆ 6 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಅನಂತ್ನಾಗ್, ಶ್ರೀನಗರ ಸೇರಿದಂತೆ ಬಾರಾಮುಲ್ಲಾ ಜಿಲ್ಲೆಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಹಿಜ್ಬುಲ್ ಮುಜಾಹುದ್ದೀನ್ ಸಂಘಟನೆಯ ಮುಖ್ಯಸ್ಥರ ಪುತ್ರರು ಹಾಗೂ ಪ್ರಮುಖ ಭಯೋತ್ಪಾದಕರಲ್ಲಿ ಓರ್ವನಾದ ಸೈಯದ್ ಸೇರಿದಂತೆ ಜಮ್ಮು-ಕಾಶ್ಮೀರ ಆಡಳಿತವು ತನ್ನ 11 ಉದ್ಯೋಗಿಗಳನ್ನು ಶನಿವಾರ ವಜಾ ಮಾಡಿದೆ ಎನ್ನಲಾಗುತ್ತಿದೆ.
ಶೇರ್-ಐ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಶಿಕ್ಷಣ ವಿಭಾಗದಲ್ಲಿ ಶಾಹಿದ್ ಯೂಸುಫ್, ಸಲಾಹುದ್ದೀನ್, ಸೈಯದ್ ಅಹ್ಮದ್ ಶಕೀಲ್ ಕೆಲಸ ಮಾಡುತ್ತಿದ್ದರು. ಭಯೋತ್ಪಾದನೆ ಸಂಘಟನೆಗೆ ಇವರು ಬೆಂಬಲ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.
"ಸದ್ಯ ತನಿಖಾ ಸಂಸ್ಥೆಯು ಭಯೋತ್ಪಾದಕ ಆರ್ಥಿಕ ನೆರವು ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ನಿಷೇಧಿತ ಹಿಜ್ಬುಲ್ ಮುಜಾಹುದ್ದೀನ್ ಅವರ ಉಗ್ರ ಚಟುವಟಿಕೆಗಳಿಗಾಗಿ ಹವಾಲಾ ವಹಿವಾಟಿನ ಮುಖಾಂತರ ಹಣ ಸಂಗ್ರಹ ಸೇರಿದಂತೆ, ಸ್ವೀಕರಿಸುವುದು ಹಾಗೂ ವರ್ಗಾವಣೆ ಮಾಡುವುದಲ್ಲಿ ಇವರು ಪಾಲ್ಗೊಂಡಿದ್ದಾರೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.