ನವದೆಹಲಿ, ಜು 11 (DaijiworldNews/PY): "ಜನಸಂಖ್ಯೆ ಹೆಚ್ಚಳವೇ ಸಮಾಜದ ಪ್ರಮುಖ ಸಮಸ್ಯೆಗಳಿಗೆ ಕಾರಣ. ಜನರು ಈ ಬಗ್ಗೆ ಜಾಗೃತರಾಬೇಕು" ಎಂದು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ.
ವಿಶ್ವ ಜನಸಂಖ್ಯಾ ದಿನವನ್ನುದ್ದೇಶಿಸಿ ಮಾತನಾಡಿದ ಅವರು, "ಜನಸಂಖ್ಯೆ ಹೆಚ್ಚಳದ ಕಾರಣದಿಂದ ಅಸಮಾನತೆಯಂತ ಪ್ರಮುಖವಾದ ಸಮಸ್ಯೆಗಳು ತಲೆದೋರಲು ಕಾರಣವಾಗುತ್ತದೆ. ಈ ಬಾರಿಯ ಜನಸಂಖ್ಯಾ ದಿನದಂದು, ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ನಾವು ನಮ್ಮನ್ನು ಹಾಗೂ ಸಮಾಜವನ್ನು ಜಾಗೃತಗೊಳಿಸುವ ಪ್ರತಿಜ್ಞೆಯನ್ನು ಮಾಡೋಣ" ಎಂದು ಕರೆ ನೀಡಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಕಾನೂನು ಆಯೋಗವು ಉತ್ತರ ಪ್ರದೇಶ ಜನಸಂಖ್ಯಾ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ -2021 ಕರಡನ್ನು ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ. ಜುಲೈ 19ರವರೆಗೆ ಸಾರ್ವಜನಿಕರು ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡುವಂತೆ ತಿಳಿಸಿದೆ.
ಮಸೂದೆ ಅಂಗೀಕಾರ ಪ್ರಸ್ತಾವನೆ ವಿಚಾರದ ಬಗ್ಗೆ ಶನಿವಾರ ಯುಪಿ ಎಸ್ಎಲ್ಸಿ ಮುಖ್ಯಸ್ಥ ಆದಿತ್ಯನಾಥ್ ಮಿತ್ತಲ್ ತಿಳಿಸಿದ್ದರು. "ರಾಜ್ಯದ ಜನಸಂಖ್ಯೆ ನಿಯಂತ್ರಣ ಹಾಗೂ ಕಲ್ಯಾಣಕ್ಕಾಗಿ ಕಾನೂನು ಆಯೋಗ ಈ ಪ್ರಸ್ತಾವನೆ ಇಟ್ಟಿದೆ. ಎರಡು ಮಕ್ಕಳನ್ನು ಹೊಂದುವ ನಿಯಮ ಪಾಲಿಸುವ ಯಾವುದೇ ದಂಪತಿ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದಾರೆ" ಎಂದು ಹೇಳಿದ್ದರು.