ಬೆಂಗಳೂರು, ಜು 10 (DaijiworldNews/PY): "ಕೆಲವರು ಮಹಿಳೆಯರು ಅಧಿಕಾರದಲ್ಲಿರುವುದನ್ನು ಸಹಿಸಿಕೊಳ್ಳಲಾರರು. ಭ್ರಷ್ಟರು, ನಿಷ್ಠಾವಂತ ಅಧಿಕಾರಿಗಳಿಗೆ ವರ್ಗಾವಣೆ, ಒತ್ತಡ, ಕಿರುಕುಳ ಕೊಡಬಲ್ಲರು" ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುಮಲತಾ ಹಾಗೂ ಜೆಡಿಎಸ್ ನಾಯಕರ ನಡುವೆ ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಾಕ್ಸಮರ ನಡೆಯುತ್ತಿದ್ದು, ಹೆಚ್.ಡಿ.ಕುಮಾರಸ್ವಾಮಿ ಅವರು ಸುಮಲತಾ ಅವರ ವಿರುದ್ದ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಈಗ ಟ್ವೀಟ್ ಮಾಡಿರುವ ಸುಮಲತಾ, "ಸತ್ಯದ ಪರವಾಗಿ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಕೆಲವರು ಮಹಿಳೆಯರು ಅಧಿಕಾರದಲ್ಲಿರುವುದನ್ನು ಸಹಿಸಿಕೊಳ್ಳಲಾರರು. ಭ್ರಷ್ಟರು, ನಿಷ್ಠಾವಂತ ಅಧಿಕಾರಿಗಳಿಗೆ ವರ್ಗಾವಣೆ, ಒತ್ತಡ, ಕಿರುಕುಳ ಕೊಡಬಲ್ಲರು. ಪಾಪ ಸಂಸದರನ್ನು ವರ್ಗಾವಣೆ ಮಾಡಲು ಬರುವುದಿಲ್ಲ!" ಎಂದಿದ್ದಾರೆ.
"ಕೆಆರ್ಎಸ್ ಅಣೆಕಟ್ಟನ್ನು ರಕ್ಷಿಸಿ, ಅಕ್ರಮ ಗಣಿಗಾರಿಕೆ ನಿಲ್ಲಿಸಿ" ಎಂದು ಹ್ಯಾಷ್ ಟ್ಯಾಗ್ ಮೂಲಕ ಉಲ್ಲೇಖಿಸಿದ್ದಾರೆ.