ಚಿತ್ರದುರ್ಗ, ಜು 10 (DaijiworldNews/PY): ಊಟಕ್ಕೆ ಸಾರು ಮಾಡಿಲ್ಲ ಎಂದು ಹತ್ತ ತಾಯಿಯನ್ನೇ ಮಗ ಹತ್ಯೆ ಮಾಡಿರುವ ಘಟನೆ ಜುಲೈ 8ರ ಗುರುವಾರ ತಡರಾತ್ರಿ ಜಿಲ್ಲೆಯ ಮೊಣಕಾಲ್ಮುರು ಎಂಬಲ್ಲಿ ನಡೆದಿದೆ.
ಮೃತರನ್ನು ರತ್ನಮ್ಮ (45) ಎಂದು ಗುರುತಿಸಲಾಗಿದೆ. ಮಗ ಲೋಕೇಶ್ (20) ಹಾಗೂ ಆತನ ತಾಯಿ ಇಬ್ಬರು ಸಣ್ಣ ಮನೆಯೊಂದರಲ್ಲಿ ವಾಸವಾಗಿದ್ದರು. ತಾಯಿ, ಮಗ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ, ಲೋಕೇಶ್ ಮದ್ಯವ್ಯಸನಿಯಾಗಿದ್ದು, ಇಬ್ಬರ ನಡುನೆ ಸಣ್ಣ-ಪುಟ್ಟ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತು.
ಗುರುವಾರ ರಾತ್ರಿ, ಅನ್ನಕ್ಕೆ ಸಾಂಬಾರು ಮಾಡಿಲ್ಲ ಎಂದು ತಾಯಿಯೊಂದಿಗೆ ಜಗಳವಾಡಿದ್ದು, ತಾಯಿಯ ಕೆನ್ನೆಗೆ ಹೊಡೆದು ಮನೆಯಿಂದ ಹೊರ ನೂಕಿದ ವೇಳೆ ರತ್ನಮ್ಮ ಅವರಿಗೆ ಕಬ್ಬಿಣದ ಬಾಗಿಲು ಬಲವಾಗಿ ತಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಹೊರಗಡೆ ಬಿದ್ದಿದ್ದ ತಾಯಿಯನ್ನು ಆತನೇ ಒಳಗಡೆ ತಂದು ಮಲಗಿಸಿ, ತಾನು ನಿದ್ದೆಗೆ ಜಾರಿದ್ದಾನೆ. ಬೆಳಗ್ಗೆ ತಾಯಿ ಸಾವನ್ನಪ್ಪಿದ ವಿಚಾರ ತಿಳಿದ ಆತ ತನ್ನ ಅಜ್ಜಿಯ ಬಳಿ ಹೋಗಿ ನಿನ್ನ ಮಗಳು ಮೃತಪಟ್ಟಿದ್ದಾಳೆ ಎಂದು ತಿಳಿಸಿ ಪಟ್ಟಣದ ಬಾರ್ಗೆ ತೆರಳಿದ್ದ. ಬಾರ್ನಲ್ಲಿ ಕುಡಿಯುತ್ತಿದ್ದ ಸಂದರ್ಭ ಪೊಲೀಸರು ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.