ನವದೆಹಲಿ, ಜು 10 (DaijiworldNews/PY): ಜುಲೈ ತಿಂಗಳ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಸಚಿವ ಸಂಪುಟ ಪುನರ್ರಚನೆಯಾಗಿದ್ದು, ಇದರಲ್ಲಿರುವ 78 ಮಂತ್ರಿಗಳ ಪೈಕಿ ಶೇ. 42 ಮಂದಿಯ ವಿರುದ್ದ ಕ್ರಿಮಿನಲ್ ಪ್ರಕರಣಗಳಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪ್ರಕಟಿಸಿದ ವರದಿ ತಿಳಿಸಿದೆ. ಈ ಮಂತ್ರಿಗಳ ಪೈಕಿ ನಾಲ್ವರ ವಿರುದ್ದ ಕೊಲೆಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ವರದಿ ತಿಳಿಸಿದೆ.
ಪ್ರಧಾನಿ ಮೋದಿ ಸಂಪುಟಕ್ಕೆ 15 ಮಂದಿ ಸಂಪುಟ ದರ್ಜೆ ಸಚಿವರಾಗಿ ಸೇರ್ಪಡೆಗೊಂಡಿದ್ದು, 28 ಸಚಿವರಿಗೆ ರಾಜ್ಯ ಖಾತೆಯ ಸ್ಥಾನಮಾನ ನೀಡಲಾಗಿದೆ. ಆ ಮೂಲಕ 43 ಸಚಿವರು ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
ನೂತನ ಸಂಪುಟದಲ್ಲಿರುವ 33 ಮಂತ್ರಿಗಳ (ಶೇ. 42) ವಿರುದ್ದ ಕ್ರಿಮಿನಲ್ ಪ್ರಕರಣಗಳಿವೆ. ಈ ಪೈಕಿ 24 (ಶೇ.31) ಮಂತ್ರಿಗಳ ವಿರುದ್ದ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ. ಇದರಲ್ಲಿ ಕೊಲೆ ಯತ್ನ ಹಾಗೂ ದರೋಡೆ ಪ್ರಕರಣಗಳು ಸೇರಿವೆ ಎಂದು ವರದಿ ತಿಳಿಸಿದೆ.
ಎಡಿಆರ್ ಒಂದು ಮತದಾನದ ಹಕ್ಕುಗಳ ಗುಂಪಾಗಿದ್ದು, ಚುನಾವಣೆಯ ಮುಂಚಿನ ವರದಿಗಳನ್ನು ಪ್ರಕಟಿಸುತ್ತದೆ. ರಾಜಕಾರಣಿಗಳ ಅಪರಾಧ, ಆರ್ಥಿಕ ಹಾಗೂ ಇತರೆ ಹಿನ್ನೆಲೆ ವಿವರಗಳನ್ನು ಕಲೆಹಾಕುತ್ತದೆ.
ಇದಲ್ಲದೇ, ನೂತನ ಸಚಿವ ಸಂಪುಟದ 70 (ಶೇ.90) ಮಂತ್ರಿಗಳು ಕೋಟ್ಯಾಧಿಪತಿಗಳಾಗಿದ್ದು, ಅವರ ಒಟ್ಟು ಆಸ್ತಿ 100 ಮಿಲಿಯನ್ (ಒಂದು ಕೋಟಿ) ಎಂದು ವರದಿ ತಿಳಿಸಿದೆ. ಜ್ಯೋತಿರಾದಿತ್ಯ ಸಿಂಧಿಯಾ (379 ಕೋಟಿ ರೂ. ಗೂ ಹೆಚ್ಚು), ಪಿಯೂಷ್ ಗೋಯಲ್ ( 95 ಕೋಟಿ ರೂ.ಗೂ ಹೆಚ್ಚು), ನಾರಾಯಣ್ ರಾಣೆ ( 87 ಕೋಟಿ ರೂ. ಗೂ ಹೆಚ್ಚು), ಮತ್ತು ರಾಜೀವ್ ಚಂದ್ರಶೇಖರ್ (64 ಕೋಟಿ ರೂ.ಗೂ ಹೆಚ್ಚು) ಆಸ್ತಿ ಹೊಂದಿರುವ ಸಚಿವರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರತಿ ಸಚಿವರಿಗೆ ಸರಾಸರಿ 6.24 ಕೋಟಿ ಆಸ್ತಿ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ತ್ರಿಪುರಾದ ಪ್ರತಿಮಾ ಭೂಮಿಕ್ ( 6 ಲಕ್ಷಕ್ಕಿಂತ ಹೆಚ್ಚು), ಪಶ್ಚಿಮ ಬಂಗಾಳದ ಜಾನ್ ಬಾರ್ಲಾ (14 ಲಕ್ಷಕ್ಕೂ ಹೆಚ್ಚು), ರಾಜಸ್ಥಾನದ ಕೈಲಾಶ್ ಚೌಧರಿ ( 24 ಲಕ್ಷಕ್ಕೂ ಹೆಚ್ಚು), ಒಡಿಶಾದ ಬಿಶ್ವೇಶ್ವರ ತುಡು ( 27 ಲಕ್ಷಕ್ಕಿಂತ ಹೆಚ್ಚು), ಮತ್ತು ಮಹಾರಾಷ್ಟ್ರದ ವಿ ಮುರಳೀಧರನ್ (₹ 27 ಲಕ್ಷಕ್ಕೂ ಹೆಚ್ಚು) ಆಸ್ತಿ ಹೊಂದಿದ್ದಾರೆ ಎಂದು ವರದಿ ವಿವರಿಸಿದೆ.