ಬೆಂಗಳೂರು, ಜು 10 (DaijiworldNews/PY): "ಕೆಲವೇ ದಿನಗಳಲ್ಲಿ ಪಕ್ಷದ ವರಿಷ್ಠರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ದ ಕ್ರಮ ತೆಗೆದುಕೊಳ್ಳಲಿದ್ದಾರೆ" ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.
ಜು.9ರ ಶುಕ್ರವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಯಾರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ? ಅಭಿವೃದ್ಧಿ ಕಾರ್ಯವನ್ನು ಯಾರು ಮಾಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಅರುಣ್ ಸಿಂಗ್ ಅವರು ಸಮಗ್ರವಾದ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ" ಎಂದಿದ್ದಾರೆ.
"ಯಾರು ಏನು ಮಾಡಿದರೂ ಅಥವಾ ಏನು ಮಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಬೇಕಾಗಿಲ್ಲ. ಕೊರೊನಾ ಸಂದರ್ಭ ಹೆಚ್ಚು ಕೆಲಸ ಇದ್ದ ಕಾರಣ, ಈ ವಿಚಾರಗಳ ಬಗ್ಗೆ ಹೆಚ್ಚು ಗಮನಹರಿಸಲು ಸಾಧ್ಯವಾಗಿಲ್ಲ. ಇದೀಗ ಕೇಂದ್ರ ಸಚಿವ ಸಂಪುಟ ವಿಸ್ತರಣೆಯೂ ಆಗಿದೆ, ರಾಜ್ಯದ ಕಡೆಗೆ ಮುಂದೆ ವರಿಷ್ಠರು ಗಮನಹರಿಸುತ್ತಾರೆ" ಎಂದು ಹೇಳಿದ್ದಾರೆ.
"ಕೇಂದ್ರ ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ವೇಳೆ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಮಹಿಳೆಯರಿಗೆ ಸೇರಿದಂತೆ ಹಿಂದುಳಿದವರು ಹಾಗೂ ದಲಿತರಿಗೆ ಪ್ರಧಾನಿ ಮೋದಿ ಅವರು ಆದ್ಯತೆ ನೀಡಿದ್ದಾರೆ" ಎಂದಿದ್ದಾರೆ.
"ದಲಿತರಿಗೆ ಹೆಚ್ಚು ಸ್ಥಾನ ನೀಡಿರುವ ವಿಚಾರದ ಬಗ್ಗೆ ಅವರು ಪ್ರಧಾನಿ ಮೋದಿ ಅವರನ್ನು ಅಭಿನಂದಿಸಬೇಕಿತ್ತು. ಆದರೆ, ಇದರಿಂದ ಕಾಂಗ್ರೆಸ್ಸಿಗರು ವಿಚಲಿತರಾಗಿದ್ದಾರೆ" ಎಂದು ಹೇಳಿದ್ದಾರೆ.
"ದಲಿತರಿಗೆ ಇಷ್ಟು ಸಚಿವ ಸ್ಥಾನಗಳನ್ನು ನೀಡಿರುವುದು ದರಿ ತಪ್ಪಿಸುವ ಕಾರ್ಯ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಕಾಂಗ್ರೆಸ್ಸಿಗರು ಇಷ್ಟು ವರ್ಷ ದಲಿತರನ್ನು ದಾರಿ ತಪ್ಪಿಸಿರುವ ವಿಚಾರ ನೆನಪಾಗಿ ಹೇಳಿರಬೇಕು" ಎಂದು ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.