ಬೆಂಗಳೂರು, ಜು.09 (DaijiworldNews/HR): "ಬೇರೆಯವರ ಜಗಳದಲ್ಲಿ ನಾನು ಮಧ್ಯಪ್ರವೇಶ ಮಾಡುವುದಿಲ್ಲ. ಆ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಕ್ಕೆ ಮೇಕೆದಾಟು ಯೋಜನೆ ಆದ್ಯತೆ ಆಗಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಸಂಸದೆ ಸುಮಲತಾ ಅಂಬರೀಷ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ನಡುವಣ ವಾಕ್ಸಮರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಯಾರ ಜಗಳದಲ್ಲೂ ಮಧ್ಯಪ್ರವೇಶಿಸುವ ಅವಶ್ಯಕತೆ ನಮ್ಮ ಪಕ್ಷಕ್ಕೆ ಇಲ್ಲ. ನಾನು ಸರ್ಕಾರಕ್ಕೆ ಆಗ್ರಹಿಸುವುದೇನೆಂದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ಆದ್ಯತೆ ಮೇರೆಗೆ ಮೇಕೆದಾಟು ಯೋಜನೆ ಕೆಲಸ ಮಾಡಬೇಕು" ಎಂದಿದ್ದಾರೆ.
ಇನ್ನು "ವಿರೋಧ ಪಕ್ಷವಾಗಿ ನಮ್ಮ ಕೆಲಸ ಸರ್ಕಾರಕ್ಕೆ ಸಲಹೆ ನೀಡುವುದು ಅಥವಾ ಅವರು ಕೆಲಸ ಮಾಡದಿದ್ದಾಗ ಟೀಕೆ ಮಾಡುವುದು, ಕೆಲಸ ಮಾಡಿಸುವುದು. ರೈತರು, ಜನರಲ್ಲಿ ಭಯ ಹುಟ್ಟಿಸುವ ವಿಚಾರದಲ್ಲಿ ಕಾಂಗ್ರೆಸ್ ಎಂದಿಗೂ ಭಾಗಿಯಾಗುವುದಿಲ್ಲ. ನಮ್ಮ ಆದ್ಯತೆಯಲ್ಲದ ವಿಚಾರವಾಗಿ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ನಮ್ಮ ಬಗ್ಗೆ ಏನೇ ಹೇಳಿದರೂ ನಾವು ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ಹೇಳಿದ್ದಾರೆ.