ಬೆಂಗಳೂರು, ಜು 09 (DaijiworldNews/PY): "ಪೋಷಕರು ಹಾಗೂ ಮಕ್ಕಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಬೆಂಬಲ ವ್ಯಕ್ತವಾಗಿದೆ" ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಜುಲೈ 19 ಹಾಗೂ 22ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಪರೀಕ್ಷೆಯ ಸಂಬಂಧ ವಿದ್ಯಾರ್ಥಿಲ ಜೊತೆ ನಡೆಸಿದ ಸಂವಾದಲ್ಲಿ 5,100 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚರ್ಚೆಯಲ್ಲಿ 90 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂವಾದದ ವೇಳೆ ಹಲವು ಪ್ರಶ್ನೆಗಳಿಗೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡಿದ್ದಾರೆ. ಈ ಸಂವಾದಲ್ಲಿ ಪರೀಕ್ಷೆ ನಡೆಸಲು ವಿದ್ಯಾಥಿಗಳಿಂದ ಬೆಂಬಲ ವ್ಯಕ್ತವಾಯಿತು" ಎಂದು ತಿಳಿಸಿದ್ದಾರೆ.
"ಒಂದು ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸದೇ ಗ್ರೇಡ್ ಕೊಟ್ಟಿದ್ದರೆ ನಮ್ಮನ್ನು ಕೊರೊನಾ ಬ್ಯಾಚ್ ಎಂದು ಕರೆಯುತ್ತಿದ್ದರು. ಪರೀಕ್ಷೆ ನಡೆಸುವುದು ಉತ್ತಮ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಕಳೆದ ವರ್ಷ ಆರು ದಿನಗಳ ಕಾಲ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ ಕೇವಲ ಎರಡು ದಿನಗಳಿಗೆ ಸೀಮಿತಗೊಳಿಸಲಾಗಿದೆ" ಎಂದಿದ್ದಾರೆ.
"ಕಳೆದ ವರ್ಷ ಜುಲೈನಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.13.2ರಷ್ಟಿತ್ತು. ಇವತ್ತು ಕೊರೊನಾ ಪಾಸಿಟಿವಿಟಿ ದರ ಶೇ.1.7ರಷ್ಟಿದೆ. ಅನ್ಲಾಕ್ ಆರಂಭವಾಗಿ ಎಲ್ಲಾ ವಹಿವಾಟುಗಳು ನಡೆಯುತ್ತಿವೆ. ಹಾಗಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ತಯಾರಿ ನಡೆಸಿದ್ದೇವೆ" ಎಂದು ತಿಳಿಸಿದ್ದಾರೆ.
"ಕಳೆದ ವರ್ಷ ಭಾರತ್ ಸ್ಕೌಟ್-ಗೈಡ್ಸ್ನ ಕಾರ್ಯಕರ್ತರು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್ ಸೇರಿದಂತೆ ಸ್ಯಾನಿಟೈಸರ್, ಸಾಮಾಜಿಕ ಅಂತರ, ಪರೀಕ್ಷಾ ಕೇಂದ್ರದ ಮುಂದೆ ಟ್ರಾಫಿಕ್ ಜಾಮ್ ಆಗದಂತೆ ಗಮಮಹರಿಸಿದ್ದರು. ಭಾರತ್ ಸ್ಕೌಟ್ಸ್-ಗೌಡ್ಸ್ನ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಅವರುಈ ವರ್ಷವೂ ಕೂಡಾ ನಮ್ಮೊಂದಿಗಿರುವ ಭರವಸೆ" ನೀಡಿದ್ದಾರೆ.
"ಯಾರು ಎಲ್ಲಿ ಕಾರ್ಯನಿರ್ವಹಿಸಬೇಕು ಎನ್ನುವ ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದಾರೆ. ಅಲ್ಲದೇ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್, ಪರೀಕ್ಷಾ ಸಿಬ್ಬಂದಿಗೆ ಎನ್95 ಮಾಸ್ಕ್ ಅನ್ನು ಉಚಿತವಾಗಿ ಒದಗಿಸಲಿದ್ದಾರೆ. ರೋಟರಿ ಇಂಟರ್ನ್ಯಾಷನಲ್ ಸಂಘಟನೆ 1.34 ಫೇಸ್ ಮಾಸ್ಕ್ ಹಾಗೂ ಇತರೆ ಸಂಘಟನೆ 1.10 ಲಕ್ಷ ಫೇಸ್ ಮಾಸ್ಕ್ ಅನ್ನು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನೀಡಲು ಒಪ್ಪಿದ್ದು, ಇಂದು ಸಾಂಕೇತಿಕವಾಗಿ ನೀಡುತ್ತಿದ್ದಾರೆ" ಎಂದಿದ್ದಾರೆ.
"ಒಂದು ಲಕ್ಷ ಸರ್ಜಿಕಲ್ ಮಾಸ್ಕ್ ಅನ್ನು ಅಡ್ವಾನ್ಸ್ ಎಜುಕೇಷನ್ ಸರ್ವೀಸ್, ರೈನ್ಬೋ ಚಿಲ್ಡ್ರನ್ ಆಸ್ಪತ್ರೆ ವತಿಯಿಂದ ಉಚಿತವಾಗಿ ನೀಡಿದ್ದಾರೆ. ಕಳೆದ ವರ್ಷದಂತೆ ಎಂಬೆಸ್ಸಿ ಗ್ರೂಪ್ನವರು 8,76,595 ಮಕ್ಕಳಿಗೆ ಪರೀಕ್ಷೆ ನಿರ್ವಹಣೆ ಮಾಡುವ 1.30 ಲಕ್ಷ ಸಿಬ್ಬಂದಿಗೆ ಸ್ಯಾನಿಟೈಸರ್ ಒದಗಿಸುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಮುಂದೆ ಬಂದ ಸಂಘಸಂಸ್ಥೆಗಳಿಗೆ ಕೃತಜ್ಞತೆಗಳು" ಎಂದು ತಿಳಿಸಿದ್ದಾರೆ.