ನವದೆಹಲಿ, ಜು 08 (DaijiworldNews/MS):ಜೀವ ವಾಯು ಲಭ್ಯತೆಯ ಕುರಿತು ಪರಿಶೀಲಿಸಲು ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದು, ಈ ವೇಳೆ ಭಾರತದಾದ್ಯಂತ ಆಮ್ಲಜನಕದ ಪೂರೈಕೆಯ ಕೊರತೆಯನ್ನು ನೀಗಿಸಲು 1,500 ಕ್ಕೂ ಹೆಚ್ಚು ಅಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಆಕ್ಸಿಜನ್ ಕುರಿತು ಮಾಹಿತಿ ನೀಡಿದ್ದಾರೆ.
ಪ್ರೆಶರ್ ಸ್ವಿಂಗ್ ಆಬ್ಸಾರ್ಪ್ಶನ್ (ಪಿಎಸ್ಎ) ಆಕ್ಸಿಜನ್ ಘಟಕಗಳ ಪ್ರಗತಿಯ ಬಗ್ಗೆ ಅಧಿಕಾರಿಗಳು ಪ್ರಧಾನಿ ಮೋದಿಗೆ ಮಾಹಿತಿ ನೀಡಿದರು ಎಂದು ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಈ ಪಿಎಂ ಕೇರ್ಸ್ ಮೂಲಕದ ಬರುವ ಪಿಎಸ್ ಎ ಆಕ್ಸಿಜನ್ ಸ್ಥಾವರಗಳು 4 ಲಕ್ಷಕ್ಕೂ ಹೆಚ್ಚು ಆಮ್ಲಜನಕಯುಕ್ತ ಹಾಸಿಗೆಗಳನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಿವೆ ಎಂದು ಅಧಿಕಾರಿಗಳು ಪ್ರಧಾನಿ ಮೋದಿಗೆ ತಿಳಿಸಿದ್ದಾರೆ.
ಈ ವೇಳೆ ಪಿಎಸ್ಎ ಆಕ್ಸಿಜನ್ ಸ್ಥಾವರಗಳ ಸ್ಥಿತಿಗತಿ ಬಗ್ಗೆ ತಿಳಿಸಿದ ನಂತರ, ಈ ಸ್ಥಾವರಗಳನ್ನು ಶೀಘ್ರ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವಂತೆ ಇದಕ್ಕಾಗಿ ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ಪ್ರಧಾನಿ ಮೋದಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಮ್ಲಜನಕ ಸ್ಥಾವರಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಮರ್ಪಕ ತರಬೇತಿ ನೀಡುವಂತೆ ಪ್ರಧಾನಿ ಇಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ತರಬೇತಿ ಪಡೆದ ಸಿಬ್ಬಂದಿಗಳು ಲಭ್ಯವಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದೇಶಾದ್ಯಂತ ವೈದ್ಯಕೀಯ ಆಮ್ಲಜನಕದ ಹೆಚ್ಚಳ ಹಾಗೂ ಲಭ್ಯತೆಯನ್ನು ಪರಿಶೀಲಿಸಲು ಪ್ರಧಾನಿ ಮೋದಿ ಶುಕ್ರವಾರ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಕ್ಯಾಬಿನೆಟ್ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.