ಬೆಂಗಳೂರು, ಜು 08 (DaijiworldNews/MS): ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಮಾತಿನ ಸಮರ ತಾರಕಕ್ಕೇರಿದ್ದು, ವೈಯಕ್ತಿಕ ಮಟ್ಟದಲ್ಲಿಯೂ ಪರಸ್ಪರ ಟೀಕೆ ಕೇಳಿಬರಲಾರಂಭಿಸಿದೆ. ಈ ಬೆಳವಣಿಗೆಗಳ ನಡುವೆ ಸುಮಲತಾ ಅವರು ಪತ್ರಿಕಾಗೋಷ್ಟಿ ನಡೆಸಿದ್ದು, ಅಂಬರೀಶ್ ಮೃತದೇಹ ಮಂಡ್ಯಕ್ಕೆ ಕರೆದೊಯ್ದ ವಿಚಾರದಿಂದ ಹಿಡಿದು, ಸ್ಮಾರಕ ನಿರ್ಮಾಣದವರೆಗೂ ಆದ ಘಟನೆಗಳ ಬಗ್ಗೆ ಸುಮಲತಾ ಭಾವುಕರಾಗಿ ಮಾತನಾಡಿದ್ದಾರೆ.
ಕುಮಾರಸ್ವಾಮಿ ಅವರ ಮಾತುಗಳನ್ನು ಲೂಸ್ ಟಾಕ್ ಎಂದ ಅವರು, ಅವರ ಮಾತುಗಳೇ ಅವರ ವ್ಯಕ್ತಿತ್ವ, ಸ್ವರೂಪ ಏನೆಂಬುದನ್ನು ಜನರಿಗೆ ತೋರುತ್ತದೆ ಎಂದು ಹೇಳಿದ್ದಾರೆ. ಅಂಬರೀಶ್ ಅಭಿಮಾನಿಗಳಿಗೆ ಅವರ ರಾಜಕಾರಣ ಹೇಗಿತ್ತು ಎಂಬುವುದು ಗೊತ್ತಿದೆ. ನಾನು ಅನುಕಂಪದ ಅಲೆಯಿಂದ ಮಂಡ್ಯದಲ್ಲಿ ಗೆದ್ದೆ ಅನ್ನುತ್ತಿದ್ದಾರೆ, ಜೆಡಿಎಸ್ ನಾಯಕರೇಕೆ ಅಂಬರೀಷ್ ಅವರ ಹೆಸರನ್ನು ಪ್ರಸ್ತಾಪಿಸಬೇಕು. ಕುಮಾರಸ್ವಾಮಿಯವರೇಕೆ ಈಗ ಅನುಕಂಪ ಸೃಷ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಅಂಬರೀಷ್ ಅವರ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿ ಸಹಿ ಹಾಕಿಸಿದ್ದು ಕುಮಾರಸ್ವಾಮಿಯವರು ಅಲ್ಲ, ಸ್ಮಾರಕ ನಿರ್ಮಾಣಕ್ಕೆ ಅವರು ಏನೂ ಅನುಕೂಲ ಮಾಡಿಕೊಟ್ಟಿರಲಿಲ್ಲ. ಅಂಬರೀಶ್ ಸ್ಮಾರಕ ವಿಚಾರವಾಗಿ ಹೆಚ್.ಡಿ.ಕೆ. ಭೇಟಿಗೆ ಹೋದಾಗ ಅವರು ಯಾವ ರೀತಿ ವರ್ತಿಸಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ. ಸ್ಮಾರಕ ನಿರ್ಮಾಣ ಕುರಿತು ಹಿರಿಯ ನಟರಾದ ದೊಡ್ಡಣ್ಣ ಮತ್ತು ಶಿವರಾಮಣ್ಣನವರು ಮಾತನಾಡಲು ವಿಧಾನಸೌಧಕ್ಕೆ ಹೋಗಿದ್ದಾಗ ಅವರನ್ನು ಕಾಯಿಸಿ ಏಕವಚನದಲ್ಲಿ ಬೈದು ಮುಖಕ್ಕೆ ಪೇಪರ್ ಎಸೆದು ಇದೇ ಕುಮಾರಸ್ವಾಮಿಯವರು ಕಳುಹಿಸಿದ್ದರು ಎಂದು ಆರೋಪಿಸಿದರು.
ಅಂಬರೀಶ್ ಸ್ಮಾರಕ ಕುಮಾರಸ್ವಾಮಿ ಮಾಡಿಸಿದ್ದಲ್ಲ. ಹಾಲಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಸಹಿ ಹಾಕಿ ಒಪ್ಪಿಗೆ ನೀಡಿದ್ದು ಎಂಡು ಇದೇ ವೇಳೆ ಸ್ಪಷ್ಟಪಡಿಸಿದರು.