ಬೆಂಗಳೂರು, ಜು 09 (DaijiworldNews/PY): "ಪದವಿ ಕಾಲೇಜುಗಳ ಆರಂಭ ದಿನಾಂಕದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ಗೊಂದಲ ಬೇಡ" ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಪದವಿ ಕಾಲೇಜುಗಳ ಆರಂಭದ ದಿನಾಂಕದ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಈ ವಿಚಾರದ ಬಗ್ಗೆ ಗೊಂದಲ ಬೇಡ. ಸದ್ಯಕ್ಕೆ ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದು ಮಾತ್ರವೇ ಸರ್ಕಾರದ ಆದ್ಯತೆ. ಕೊರೊನಾ ಸಂಪೂರ್ಣವಾಗಿ ನಿವಾರಣೆಯಾಗದೇ ಇರುವ ಕಾರಣ ಪದವಿ ಕಾಲೇಜುಗಳ ಆರಂಭದ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ" ಎಂದಿದ್ದಾರೆ.
"ರಾಜ್ಯದಲ್ಲಿ ಶೇ.65.14ರಷ್ಟು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗಿದೆ. ರಾಜ್ಯದ ಆರು ಶೈಕ್ಷಣಿಕ ವಲಯಗಳ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ 4.90 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಇಲ್ಲಿಯವರೆಗೆ 3.13 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. 29,241 ಸಿಬ್ಬಂದಿಗಳಲ್ಲಿ 24,875 ಮಂದಿಗೆ ಲಸಿಕೆ ಹಾಕಲಾಗಿದೆ" ಎಂದಿದ್ದಾರೆ.
"ಪದವಿ ಕಾಲೇಜುಗಳ ಆರಂಭ ದಿನಾಂಕದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ಗೊಂದಲ ಬೇಡ. ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಒದಗಿಸುವುದು ನಮ್ಮ ಪ್ರಥಮ ಆದ್ಯತೆ. ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಈಗಾಗಲೇ 65% ಲಸಿಕಾಕರಣವಾಗಿದೆ. ಖಾಸಗಿ ಕಾಲೇಜುಗಳಲ್ಲೂ ತ್ವರಿತವಾಗಿ ಲಸಿಕಾಕರಣ ನಡೆಸಲು ಸೂಚಿಸಲಾಗಿದೆ. ಎಲ್ಲರ ಸುರಕ್ಷತೆ ಕಾಪಾಡೋಣ" ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.