ಲಕ್ನೋ, ಜು 09 (DaijiworldNews/PY): ಉತ್ತರಪ್ರದೇಶದ ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಸುವ ನಿಟ್ಟಿನಲ್ಲಿ ತೆರಳುತ್ತಿದ್ದ ಸಮಾಜವಾದಿ ಪಕ್ಷದ ಮಹಿಳಾ ಕಾರ್ಯಕರ್ತೆಯನ್ನು ರಸ್ತೆಯಲ್ಲಿಯೇ ಅಡ್ಡಗಟ್ಟಿ ಸೀರೆಯನ್ನು ಎಳೆದಾಡಿದ ಘಟನೆ ಲಖಿಂಪುರ ಖೇರಿಯಲ್ಲಿ ನಡೆದಿದೆ.
"ಸಮಾಜವಾದಿ ಪಕ್ಷದ ಮಹಿಳಾ ಅಭ್ಯರ್ಥಿಯೋರ್ವರು ಸ್ಥಳೀಯ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ಸಂದರ್ಭ ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ನಾಮಪತ್ರ ಸಲ್ಲಿಸುವುದನ್ನು ತಡೆಯುವ ನಿಟ್ಟಿನಲ್ಲಿ ಆಕೆಯ ಕೈಯಲ್ಲಿದ್ದ ನಾಮಪತ್ರವನ್ನು ಎಳೆದುಕೊಂಡಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರು ನಮ್ಮ ಪಕ್ಷದ ಅಭ್ಯರ್ಥಿಯ ಮೇಲೆ ಹಲ್ಲೆ ನಡೆಸಿ, ಸೀರೆಯನ್ನು ಹಿಡಿದೆಳೆದಿದ್ದಾರೆ ಎಂದು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರು ಆರೋಪಿಸಿದ್ದು, ಈ ಬಗ್ಗೆ ವಿಡಿಯೋ ಮಾಡಿದ್ದು, ಅಧಿಕಾರದ ಹಸಿವಿನಲ್ಲಿರುವ ಯೋಗಿ ಆದಿತ್ಯನಾಥ್ ಅವರ ಗೂಂಡಾಗಳು ಎಂದಿದ್ದಾರೆ.
ಸ್ಥಳೀಯ ಪಂಚಾಯತ್ ಮುಖ್ಯಸ್ಥರ ಆಯ್ಕೆಗೆ ನಾಮಪತ್ರ ಪ್ರಕ್ರಿಯೆ ನಡೆದಿದ್ದು, ಒಂದು ಡಜನ್ಗೂ ಹೆಚ್ಚು ಸ್ಥಳಗಳಲ್ಲಿ ಘರ್ಷಣೆಗಳು ಆದ ಬಗ್ಗೆ ವರದಿಯಾಗಿವೆ.
ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹಿಂಸಾಚಾರದ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದು, ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.