ಬೆಂಗಳೂರು, ಜು 09 (DaijiworldNews/PY): ಎರಡು ತಿಂಗಳ ಬಳಿಕ ರಾಜ್ಯದಿಂದ ಕೇರಳಕ್ಕೆ ಬಸ್ಗಳನ್ನು ಓಡಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ತೀರ್ಮಾನಿಸಿದೆ.
ಜುಲೈ 12ರಿಂದ ಕೇರಳಕ್ಕೆ ಬಸ್ ಸಂಚಾರ ಪ್ರಾರಂಭಗೊಳ್ಳಲಿದೆ. ಪ್ರಯಾಣ ಮಾಡಲು ಇಚ್ಛಿಸುವವರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಟಿಕೆಟ್ಗಳನ್ನು ಕಾಯ್ದಿರಿಸುವ ವಿಚಾರದ ಬಗ್ಗೆಯೂ ವಿವರಗಳನ್ನು ಒದಗಿಸಿದೆ.
ಪ್ರಯಾಣ ಮಾಡಲು ಇಚ್ಛಿಸುವವರು ಟಿಕೆಟ್ಗಳನ್ನು ಮುಂಗಡವಾಗಿ ಆನ್ಲೈನ್ನಲ್ಲಿ ksrtc.karnataka.gov.in / www.ksrtc.in ಮೂಲಕ ಬುಕ್ ಮಾಡಬಹುದಾಗಿದೆ. ಇದಲ್ಲದೇ, ಕೆಎಸ್ಆರ್ಟಿಸಿ ಫ್ರಾಂಚೈಸಿ ಹಾಗೂ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್ಗಳಲ್ಲಿ ಕೂಡಾ ಟಿಕೆಟ್ಗಳನ್ನು ಬುಕ್ ಮಾಡಬಹುದು ಎಂದು ತಿಳಿಸಿದೆ.
ರಾಜ್ಯದಲ್ಲಿ ಅನ್ಲಾಕ್ 3.0ದಲ್ಲಿ ಜುಲೈ 5ರಿಂದ ವಿವಿಧ ರಾಜ್ಯಗಳಿಗೆ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇರಳಕ್ಕೆ ಬಸ್ ಪ್ರಾರಂಭಿಸಲು ಮುಂದಾಗಿದೆ. ಆದರೆ, ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಕೇರಳಕ್ಕೆ, ಮಂಗಳೂರು ಸೇರಿದಂತೆ ಬೆಂಗಳೂರು, ಪುತ್ತೂರು, ಮೈಸೂರಿನಿಂದ ಬಸ್ಗಳು ತೆರಳಲಿವೆ. ವಿದ್ಯಾರ್ಥಿಗಳು, ವ್ಯಪಾರ ಹಾಗೂ ಇತರೆ ಕಾರಣಗಳಿಂದ ನಿತ್ಯ ಕೇರಳ ಹಾಗೂ ಕರ್ನಾಟಕದ ನಡುವೆ ಪ್ರಯಾಣ ಬೆಳೆಸುವ ಜನರು 15 ದಿನಗಳಿಗೊಮ್ಮೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳುತ್ತಿರಬೇಕು ಹಾಗೂ ಕೊರೊನಾ ನೆಗೆಟಿವ್ ವರದಿ ಹೊಂಡಿರಬೇಕು ಎಂದು ಕೆಎಸ್ಆರ್ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಲ್ಲದೇ, ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಕೊರೊನಾ ಮಾರ್ಗಸೂಚಿಗಳನ್ನು ಪ್ರಯಾಣಿಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದೆ.