ನವದೆಹಲಿ, ಜು 09 (DaijiworldNews/PY): "ಚೀನಾ, ಗಡಿ ಸಮಸ್ಯೆಗಳ ಬಗೆಗಿನ ದ್ವಿಪಕ್ಷೀಯ ಒಪ್ಪಂದಗಳನ್ನು ಗೌರವಿಸುತ್ತಿಲ್ಲ" ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಮಾಸ್ಕೊದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗಡಿ ಸಮಸ್ಯೆಗಳ ಬಗೆಗಿನ ದ್ವಿಪಕ್ಷೀಯ ಒಪ್ಪಂದಗಳನ್ನು ಚೀನಾ ಗೌರವಿಸುತ್ತಿಲ್ಲ. ಭಾರತ ಹಾಗೂ ಚೀನಾ ನಡುವಿನ ಸಂಬಂಧವನ್ನೇ ಇದು ಅಲ್ಲಾಡಿಸುತ್ತಿದೆ. ಕಳೆದ ಒಂದು ವರ್ಷದಿಂದ ಚೀನಾದೊಂದಿಗಿನ ಸಂಬಂಧ ಆತಂಕ ಸೃಷ್ಟಿಯಾಗಿದೆ" ಎಂದಿದ್ದಾರೆ.
"ಗಡಿಯಲ್ಲಿ 45 ವರ್ಷಗಳ ನಂತರ ಗಡಿಯಲ್ಲಿ ಸಾವು-ನೋವಿನ ಘಟನೆಗಳು ಸಂಭವಿಸಿವೆ. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ದೇಶಕ್ಕೆ ತನ್ನ ನೆರೆಯ ದೇಶದೊಂದಿಗಿನ ಸಂಬಂಧ ಅಡಿಪಾಯ. ಹಾಗಾಗಿ ಇಂತ ಅಡಿಪಾಯಕ್ಕೆ ಸಹಜವಾಗಿ ಧಕ್ಕೆ ಉಂಟಾಗಿದ್ದು, ಹಾಗೆಯೇ ಸಂಬಂಧಕ್ಕೂ ಕೂಡಾ ಧಕ್ಕೆಯುಂಟಾಗಿದೆ" ಎಂದು ಹೇಳಿದ್ದಾರೆ.
"ಗಡಿಯಿಂದ ಸಂಪೂರ್ಣವಾಗಿ ಸೈನಿಕರನ್ನು ವಾಪಾಸ್ಸು ಕರೆಸಿಕೊಳ್ಳುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಸಂಬಂಧ ವೃದ್ಧಿಗೆ ಇದು ಮುಖ್ಯವಾದ ಅಂಶವಾಗಿದೆ. ಆದರೆ, ಚೀನಾ-ಭಾರತದ ನಡುವೆ ಅಣ್ವಸ್ತ್ರ ಪೈಪೋಟಿ ಇಲ್ಲ" ಎಂದಿದ್ದಾರೆ.