ಬೆಂಗಳೂರು, ಜು 08 (DaijiworldNews/MS):ಕೆಆರ್ ಎಸ್ ಡ್ಯಾಂನ ವಿಚಾರದಲ್ಲಿ ಮಂಡ್ಯ ಸಂಸದೆ ಸುಮಲತಾ ಮತ್ತು ಜೆಡಿಎಸ್ ನಾಯಕರಾದ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರ ನಡುವೆ ವಾಗ್ದಾಳಿಯ ಮುಂದುವರಿದಿದ್ದು ಈ ವಿಚಾರವಾಗಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮಧ್ಯಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ಅಕ್ರಮ ಗಣಿಗಾರಿಕೆ, ಕೆಆರ್ ಎಸ್ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್.ಡಿ ಕುಮಾರಸ್ವಾಮಿ ಸೇರಿ ಜೆಡಿಎಸ್ ನಾಯಕರು ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಡುವೆ ಭಾರಿ ಜಟಾಪಟಿ, ವಾಗ್ವಾದ ನಡೆಯುತ್ತಿದೆ
ಕೆಆರ್ಎಸ್ ಡ್ಯಾಂ ಬಾಗಿಲಿಗೆ ಅಡ್ಡಲಾಗಿ ಸುಮಲತಾ ಅವರನ್ನು ಕಟ್ಟಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಇಬ್ಬರ ನಡುವಿನ ಹೇಳಿಕೆ, ಪ್ರತಿ ಹೇಳಿಕೆಗಳು ಮುಂಬರುವ ಚುನಾವಣೆಗಳಿಗೆ ಪ್ರಬಲ ಅಸ್ತ್ರಗಳಾದಂತೆ ಕಾಣಿಸುತ್ತಿತ್ತು.
ಕನ್ನಂಬಾಡಿ ಕದನವೂ ಮೊದ ಮೊದಲು ರಾಜಕೀಯವಾಗಿದ್ದೂ ಬಳಿಕ ಇದೀಗ ವೈಯಕ್ತಿಕ ಮಟ್ಟದಲ್ಲಿಯೂ ಪರಸ್ಪರ ಟೀಕೆ ನಡೆಯುತ್ತಿದೆ. 2019ರ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಸಂಸದೆ ವಿರುದ್ದ ಜಿದ್ದಾಜಿದ್ದಿನ ರಾಜಕಾರಣಕ್ಕೆ ಜೆಡಿಎಸ್ ನಾಯಕರು ಮುಂದಾಗಿದ್ದರು.
ಈ ನಡುವೆ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಕದನಕ್ಕೆ ವಿರಾಮ ಹಾಕಲು ಮುಂದಾಗಿದ್ದಾರೆ. ಜೆಡಿಎಸ್ ನಾಯಕರಿಗೆ ಟೀಕೆ-ಟಿಪ್ಪಣಿಗಳು ತೀವ್ರ ವೈಯಕ್ತಿಕ ಮಟ್ಟಕ್ಕೆ ಹೋದರೆ ಇದರಿಂದ ಪಕ್ಷಕ್ಕೆ ಧಕ್ಕೆಯಾಗುತ್ತದೆ, ರಾಜ್ಯದ ಜನತೆಗೆ ಬೇರೆ ಸಂದೇಶ ರವಾನೆಯಾಗುತ್ತದೆ, ಅದಕ್ಕೆ ಅವಕಾಶ ಮಾಡಿಕೊಡದಂತೆ ದೇವೇಗೌಡರು ತಮ್ಮ ಪಕ್ಷದ ನಾಯಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.