ಶ್ರೀನಗರ, ಜು.09 (DaijiworldNews/HR): ಉಗ್ರರು ಮತ್ತು ಭದ್ರತಾ ಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರ ಹತ್ಯೆಯಾಗಿದ್ದು, ಇಬ್ಬರು ಯೋಧರು ಹುತಾತ್ಮರಾದ ಘಟನೆ ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ದಾದಲ್ ಹಾಗೂ ಸುಂದರ್ಬನಿ ಸೆಕ್ಟರ್ನಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ಜಮ್ಮು ಪ್ರದೇಶದ ಭಾರತೀಯ ವಾಯುಪಡೆಯ ನೆಲೆಯ ಮೇಲೆ ಡ್ರೋನ್ ದಾಳಿ ನಡೆಸಿ ಬಳಿಕ ಭಾರತೀಯ ಸೈನಿಕರು ಎನ್ಕೌಂಟರ್ಗಳು ಮತ್ತು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಈ ಕುರಿತು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದು, "ರಾಜೌರಿ ಜಿಲ್ಲೆಯ ದಾದಲ್, ಸುಂದರಬಾನಿ ಸೆಕ್ಟರ್ನಲ್ಲಿ ಒಳನುಸುಳುವಿಕೆ ಮತ್ತು ಭಯೋತ್ಪಾದಕರ ಕೃತ್ಯಗಳ ಬಗ್ಗೆ ಮಾಹಿತಿ ಲಭಿಸಿದ್ದು, ಆ ಆಧಾರದ ಮೇಲೆ ಭದ್ರತಾ ಪಡೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಜುಲೈ 8 ರಂದು ದಾದಲ್ ಕಾಡಿನಲ್ಲಿ ಉಗ್ರರನ್ನು ಪತ್ತೆ ಹಚ್ಚಿದಾಗ ಗುಂಡಿನ ಚಕಮಕಿ ನಡೆದಿದೆ" ಎಂದು ಹೇಳಿದರು.
ಇನ್ನು ಈ ವೇಳೆ ಉಗ್ರರು ಗುಂಡು ಹಾರಿಸಿ, ಗ್ರೆನೇಡ್ಗಳನ್ನು ಎಸೆಯಲು ಆರಂಭಿಸಿದ್ದು, ಎನ್ಕೌಂಟರ್ ಆಗಿ ಇಬ್ಬರು ವಿದೇಶಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಭಾರತೀಯ ಯೋಧರು ಕೂಡಾ ಮೃತಪಟ್ಟಿದ್ದು, ಇನ್ನಿಬ್ಬರು ಯೋಧರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದುತಿಳಿಸಿದ್ದಾರೆ.