ತಿರುವನಂತಪುರಂ, ಜು 08 (DaijiworldNews/MS): ಕೇರಳದ ತಿರುವನಂತಪುರಂದಲ್ಲಿ ಝಿಕಾ ವೈರಸ್ ನ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗುರುವಾರ ತಿಳಿಸಿದ್ದಾರೆ.
ತಿರುವನಂತಪುರಂನ ಪರಸ್ಸಲಾದ 24 ವರ್ಷದ ಗರ್ಭಿಣಿಯು ಸೊಳ್ಳೆಯಿಂದ ಹರಡುವ ಝಿಕಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯಲ್ಲಿ ಜೂನ್ 28ರಂದು ಜ್ವರ, ತಲೆನೋವು ಮತ್ತು ದೇಹದ ಮೇಲೆ ಕೆಂಪು ಮಚ್ಚೆ ಮುಂತಾದ ರೋಗಲಕ್ಷಣಗಳು ಕಂಡುಬಂದಿತ್ತು. ಗರ್ಭಿಣಿಯಾಗಿದ್ದ ಮಹಿಳೆಗೆ ಜೂನ್ ೭ ರಂದು ಹೆರಿಗೆಯಾಗಿದೆ. ಸದ್ಯಕ್ಕೆ ಮಹಿಳೆಯ ಸ್ಥಿತಿ ಸ್ಥಿರವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ತಿರುವನಂತಪುರಂನಿಂದ ಕಳುಹಿಸಲಾದ 19 ಮಾದರಿಗಳಲ್ಲಿ, ವೈದ್ಯರು ಸೇರಿದಂತೆ 13 ಆರೋಗ್ಯ ಕಾರ್ಯಕರ್ತರಿಗೆ ಝಿಕಾ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ನಡೆದ ಪರೀಕ್ಷೆಯಲ್ಲಿ ಮಹಿಳೆಗೆ ಝಿಕಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇವರ ಹಾಗೂ ಇತರರ ಪ್ರಯೋಗಾಲಯ ಮಾದರಿಗಳನ್ನು ಪುಣೆಯ ಎನ್ಐವಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ
ಮಹಿಳೆಯೂ ಹೊರ ರಾಜ್ಯಕ್ಕೆ ಪ್ರಯಾಣ ಮಾಡಿದ ಇತಿಹಾಸವಿಲ್ಲದಿದ್ದರೂ, ಆಕೆಯ ಮನೆ ತಮಿಳುನಾಡು ಗಡಿಯಲ್ಲಿದೆ. ಝಿಕಾ ರೋಗಲಕ್ಷಣಗಳಾದ ಜ್ವರ, ಚರ್ಮದ ದದ್ದುಗಳು ಮತ್ತು ಕೀಲು ನೋವು ಡೆಂಗ್ಯೂ ರೋಗಲಕ್ಷಣಗಳನ್ನೇ ಹೋಲುತ್ತವೆ.