ಹಾಸನ, ಜು.08 (DaijiworldNews/HR): "ಎಚ್.ಡಿ.ದೇವೇಗೌಡ ಬದುಕಿರುವವರೆಗೂ ನಮ್ಮ ಕುಟುಂಬವನ್ನು ಒಡೆಯಲು ಸಾಧ್ಯವಿಲ್ಲ ಹಾಗೂ ಯಾರಿಂದಲೂ ಸಂಸ್ಕೃತಿ ಕಲಿಯಬೇಕಿಲ್ಲ" ಎಂದು ಶಾಸಕ ಎಚ್.ಡಿ.ರೇವಣ್ಣ ಅವರು ಸಂಸದೆ ಸುಮಲತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರನ್ನು ನೋಡಿ ಎಚ್.ಡಿ.ಕುಮಾರಸ್ವಾಮಿ ಸಂಸ್ಕಾರ ಕಲಿಯಲಿ ಎಂಬ ಮಂಡ್ಯ ಸಂಸದೆ ಸುಮಲತಾ ಹೇಳಿಕೆಗೆ ಗುರುವಾರ ತಿರುಗೇಟು ನೀಡಿದ ಅವರು, "ಅಕ್ರಮ ಗಣಿಗಾರಿಕೆ ಮಾಡಿದ್ದರೆ ತನಿಖೆ ನಡೆಸಲಿ. ಸರ್ಕಾರದ ಹಣ ಲೂಟಿ ಮಾಡುತ್ತಿರುವವರನ್ನು ಬಲಿ ಹಾಕಲಿ. ಅದು ಬಿಟ್ಟು ಕುಮಾರಸ್ವಾಮಿ ಹಣ ಹೊಡೆಯುತ್ತಾರೆ ಅಂದರೆ ಏನು ಅದರ ಅರ್ಥ. ಗೌಡರ ಕುಟುಂಬ ಯಾವುದಾದರೂ ಶಾಲೆ, ಕಾಲೇಜು ಮತ್ತು ಕ್ರಷರ್ ನಡೆಸುತ್ತಿದೆಯೇ?" ಎಂದು ಪ್ರಶ್ನಿಸಿದ್ದಾರೆ.
ಇನ್ನು ಕುಮಾರಸ್ವಾಮಿ ಅವರು ದ್ವೇಷದ ರಾಜಕಾರಣ ಮಾಡುವುದಿಲ್ಲ. ಅಂಬರೀಶ್ ಮೃತಪಟ್ಟಾಗ ಒಬ್ಬ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಹೇಗೆ ನಡೆದುಕೊಂಡರು ಎಂಬುದು ಗೊತ್ತು. ವಿಷ್ಣುವರ್ಧನ್ ಸತ್ತಾಗ ಯಾರು ಹೇಗೆ ನಡೆದುಕೊಂಡರು ಎಂಬುದನ್ನು ನೋಡಿದ್ದೇನೆ. ಒಂದು ಕುಟುಂಬದಿಂದ ಪಕ್ಷ ಉಳಿಯುವುದಿಲ್ಲ. ಕಾರ್ಯಕರ್ತರಿಗೆ ಪಕ್ಷ ಉಳಿಸಿಕೊಳ್ಳುವುದು ಗೊತ್ತು" ಎಂದಿದ್ದಾರೆ.