ರಾಮನಗರ, ಜು 08 (DaijiworldNews/PY): "ರೇಣುಕಾಚಾರ್ಯ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾನೆ. ಆತನಿಗೆ ಬೆಂಗಳೂರಿನಲ್ಲಿ ಐಷಾರಾಮಿ ಮನೆ ಸಿಕ್ಕಿದೆ. ಆತನ ಕ್ಷೇತ್ರಕ್ಕೆ ಸರ್ಕಾರದಿಂದ ಸಾವಿರಾರು ಕೋಟಿ ರೂ. ಸಿಕ್ಕಿದೆ ಎಂದರೆ ಅಲ್ಲಿ ನನ್ನ ಶ್ರಮವಿದೆ" ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ನನ್ನ ಮಾತಿಗೆ ಬದ್ದವಾಗಿದ್ದೇನೆ. ಬೇರೆಯವರ ಮಾತುಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಿಎಂ ಅವರ ಆಡಳಿತವನ್ನು ನಾನೂ ಕೂಡಾ ಒಪ್ಪಿದ್ದೇನೆ. ಸಿಎಂ ಅವರ ಸಮಥವಾಗಿ ಆಡಳಿತ ನಡೆಸುತ್ತಿದ್ದಾರೆ. ಆದರೆ, ಸರ್ಕಾರದಲ್ಲಿ ನನಗೆ ಆಗಿರುವ ನೋವನ್ನು ತಡೆಯಲಾರದೇ ನಿಮ್ಮೊಂದಿಗೆ ಪಕ್ಷದ ವರಿಷ್ಠರೊಂದಿಗೆ ಹಂಚಿಕೊಂಡಿದ್ದೇನೆ" ಎಂದಿದ್ದಾರೆ.
"ಪ್ರಧಾನಿ, ಮಂತ್ರಿ ಮಂಡಲ ನಿನ್ನೆ ವಿಸ್ತರಿಸಿದ್ದಾರೆ. ಅದೇ ರೀತಿ ಸಿಎಂ ಅವರು ಕೂಡಾ ಮಾಡಬೇಕು. ನಾನು ಮೀಡಿಯಾದಲ್ಲಿ ಮಾತನಾಡಿದರೆ, ಹೆಚ್.ಡಿ.ಕುಮಾರಸ್ವಾಮಿ ಬೆಳಗ್ಗೆ ಸಿಎಂ ಬಳಿ ತೆರಳುತ್ತಾರೆ. ಡಿ.ಕೆ.ಶಿವಕುಮಾರ್ ರಾತ್ರಿ ಹೋಗುತ್ತಾರೆ" ಎಂದು ಹೇಳಿದ್ದಾರೆ.
"ಬಿಜೆಪಿ ಪಕ್ಷಕ್ಕೆ ಎಲ್ಲಿಂದಲೋ ಬಂದವರನ್ನು ನಾವು ಸೇರಿಸಿಕೊಳ್ಳುವುದಿಲ್ಲ. ಜೈಲಿಗೆ ಹೋದವರನ್ನೂ ಕೂಡಾ ನಾವು ಸೇರಿಸಿಕೊಳ್ಳುವುದಿಲ್ಲ" ಎಂದು ಕಾಂಗ್ರೆಸ್ಗೆ ಬರುವಂತೆ ಆಹ್ವಾನಿಸಿರುವ ಡಿಕೆಶಿಗೆ ಯೋಗೇಶ್ವರ್ ತಿರುಗೇಟು ನೀಡಿದ್ದಾರೆ.
"ಅನೇಕ ವರ್ಷಗಳಿಂದ ಕೆಆರ್ಎಸ್ ಸುತ್ತಲೂ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಮಂಡ್ಯ ಸಂಸದರಿಗೆ ಈ ವಿಚಾರದ ಬಗ್ಗೆ ಆತಂಕವಿರಬೇಕು. ಈ ವಿಚಾರದ ಬಗ್ಗೆ ಕುಮಾರಸ್ವಾಮಿ ಮಾತನಾಡುವುದು ಸೂಕ್ತವಲ್ಲ" ಎಂದಿದ್ದಾರೆ.
"ಮಂಡ್ಯದಲ್ಲಿ ಕುಮಾರಸ್ವಾಮಿ ಪುತ್ರ ಸೋತಿದ್ದಾನೆ. ಜೆಡಿಎಸ್ಗೆ ಉತ್ತರ ಕರ್ನಾಟಕದಲ್ಲಿ ನೆಲೆ ಇಲ್ಲ. ಹಾಗಾಗಿ ಅವರು ಮಂಡ್ಯ ಬಿಡಲು ಸಿದ್ದರಿಲ್ಲ. ಹಾಗಾಗಿ ಅವರು ಏನೇನೋ ಮಾತನಾಡುತ್ತಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.