ಬೆಂಗಳೂರು, ಜು.08 (DaijiworldNews/HR): ಜುಲೈ 6 ರಂದು ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 35,434 ಕ್ಕೆ ತಲುಪಿದ್ದು, ದಕ್ಷಿಣ ಭಾರತದಲ್ಲಿ ಕೊರೊನಾ ಸಾವುಗಳ ಪಟ್ಟಿಯಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದೆ. ಭಾರತದ ವಿಷಯಕ್ಕೆ ಬಂದರೆ ರಾಜ್ಯವು ಎರಡನೇ ಸ್ಥಾನದಲ್ಲಿದೆ.
ರಾಜ್ಯ ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕೊರೊನಾ ಪ್ರಾರಂಭವಾದಾಗಿನಿಂದ ಮೃತಪಟ್ಟವರಲ್ಲಿ ಸುಮಾರು 50% ಜನ 50 ರಿಂದ 80 ವರ್ಷದೊಳಗಿನವರಾಗಿದ್ದಾರೆ.
ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ತಲುಪಲು ವಿಳಂಬ ಮತ್ತು ಸಮಯ ತೆಗೆದುಕೊಳ್ಳುವ ಪರೀಕ್ಷೆಗಳು ರಾಜ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣಗಳಾಗಿವೆ. ಇದಲ್ಲದೆ ಮಧುಮೇಹ ಮತ್ತು ಹೃದಯ ಕಾಯಿಲೆಗಳನ್ನು ಹೊಂದಿದ್ದ ಕೊರೊನಾ ರೋಗಿಗಳು ಕೂಡ ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕಿತ ರೋಗಿಗಳ ಸಾವಿಗೆ ಶ್ವಾಸಕೋಶ, ಹೃದಯ, ಮಧುಮೇಹ ಮತ್ತು ಅಪೌಷ್ಟಿಕತೆಗೆ ಸಂಬಂಧಿಸಿದ ಕೊಮೊರ್ಬಿಡಿಟಿಗಳು ಸಹ ಕಾರಣವಾಗಿವೆ ಎಂದು ಜಯದೇವ ಹಾರ್ಟ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಸಿ ಎನ್ ಮಂಜುನಾಥ್ ಹೇಳಿದ್ದಾರೆ.
ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ದೇಶದಲ್ಲಿ ಇದುವರೆಗೆ ಅತಿ ಹೆಚ್ಚು ಸಾವುಗಳು ಸಂಭವಿಸಿದ್ದು, ತಮಿಳುನಾಡಿನಲ್ಲಿ 33,059, ಆಂಧ್ರಪ್ರದೇಶ, 12,870 ಮತ್ತು ಕೇರಳದಲ್ಲಿ 13,818, ರಾಜಸ್ಥಾನದಲ್ಲಿ 8,941 ಸಾವುಗಳು ದಾಖಲಾಗಿವೆ.
ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ, ಜುಲೈ 6 ರವರೆಗೆ ಕರ್ನಾಟಕದಲ್ಲಿ 60 ರಿಂದ 69 ವರ್ಷದೊಳಗಿನ 10,165 ಜನರು, 50 ರಿಂದ 59 ವರ್ಷದೊಳಗಿನವರಲ್ಲಿ 7,774 ಮತ್ತು 70-79 ವರ್ಷ ವಯಸ್ಸಿನ 6,872 ಜನರು ಕೊರೊನಾಗೆ ಸಾವನ್ನಪ್ಪಿದ್ದಾರೆ.
ಕೆಎಂಸಿ ಆಸ್ಪತ್ರೆಯ ಬೆಂಗಳೂರಿನ ಎಚ್ಒಡಿ ಡಾ.ಸತ್ಯನಾರಾಯಣ್, ಕೊರೊನಾದ ಯಾವ ರೂಪಾಂತರವು ರಾಜ್ಯದಲ್ಲಿ ಹೆಚ್ಚಿನ ಸಾವುಗಳಿಗೆ ಕಾರಣವಾಗಿದೆ ಎಂಬುದರ ಕುರಿತು ಯಾವುದೇ ಸಂಶೋಧನೆ ನಡೆದಿಲ್ಲ ಎಂದು ಹೇಳುತ್ತಾರೆ.
ಚೀನಾದ ವುಹಾನ್ನಲ್ಲಿ ಕೊರೊನಾ ಸೋಂಕು ಹೆಚ್ಚು ಪ್ರಚಲಿತವಾಗಿದೆ ಎಂದು ಕರ್ನಾಟಕದ ವೈದ್ಯರು ಅಭಿಪ್ರಾಯಪಟ್ಟಿದ್ದು, ಸಾರ್ವಜನಿಕರಿಂದ ಸೂಕ್ತ ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ ಹೆಚ್ಚಿನ ಸಾವುಗಳನ್ನು ತಡೆಯಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.