ಬೆಂಗಳೂರು, ಜು 08 (DaijiworldNews/PY): "ಸಚಿವರ ಕಾರ್ಯನಿರ್ವಹಣೆಯೇ ಸಂಪುಟ ಪುನಾರಚನೆಯ ಮಾನದಂಡವಾಗಿದ್ದರೆ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಪಟ್ಟದಿಂದ ಕಿತ್ತುಹಾಕಬೇಕು. ಅಸಮರ್ಥರು ಅಸಮರ್ಥರನ್ನೇ ಆಯ್ಕೆ ಮಾಡಿಕೊಂಡು ಜೊತೆಯಲ್ಲಿಟ್ಟುಕೊಳ್ತಾರೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಸಚಿವರ ಕಾರ್ಯನಿರ್ವಹಣೆಯೇ ಸಂಪುಟ ಪುನಾರಚನೆಯ ಮಾನದಂಡವಾಗಿದ್ದರೆ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಪಟ್ಟದಿಂದ ಕಿತ್ತುಹಾಕಬೇಕು. ನೋಟ್ ಬ್ಯಾನ್ನಿಂದ ಹಿಡಿದು ಕೊರೊನಾ ನಿಯಂತ್ರಣದ ವರೆಗೆ ಈ ಸರ್ಕಾರ ವಿಫಲಗೊಂಡಿದ್ದರೆ ಅದಕ್ಕೆ ನೇರ ಹೊಣೆ ನರೇಂದ್ರ ಮೋದಿಯವರು" ಎಂದು ಆರೋಪಿಸಿದ್ದಾರೆ.
"ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಏಕವ್ಯಕ್ತಿ ಪ್ರದರ್ಶನವಾಗಿರುವ ಸರ್ಕಾರದಲ್ಲಿ ಸಂಪುಟ ವಿಸ್ತರಣೆಗೆ ಯಾವ ಮಹತ್ವ ಇಲ್ಲ. ಯಾರು ಸಚಿವರಾದರೂ ಅವರೆಲ್ಲರೂ ನಾಮ್ ಕಾವಸ್ತೆ, ಹಣಕಾಸು, ಆರೋಗ್ಯ, ಶಿಕ್ಷಣ ಖಾತೆ ಯಾವುದೇ ಇರಲಿ, ನೀತಿ ನಿರ್ಧಾರಗಳನ್ನು ಪ್ರಕಟಿಸುವುದು ಪ್ರಧಾನಿ ಮೋದಿ ಅವರೇ ಆಗಿರುವ ಕಾರಣ ಆ ಖಾತೆಗಳ ವೈಫಲ್ಯಕ್ಕೆ ಅವರೇ ಹೊಣೆ" ಎಂದಿದ್ದಾರೆ.
"ಆಗಾಗ ಟಿವಿಗಳಲ್ಲಿ ಕಾಣಿಸಿಕೊಂಡು ಜಾಗಟೆ ಬಡಿದು, ದೀಪ ಹಚ್ಚಿ ಕೊರೊನಾ ವೈರಸ್ ಓಡಿಸಲು ಹೇಳಿದ ಮತ್ತು ಆರೋಗ್ಯ ಸಚಿವರನ್ನು ಬದಿಗೊತ್ತಿ ಎಲ್ಲ ನಿರ್ಧಾರಗಳನ್ನು ಕೈಗೊಂಡವರು ಪ್ರಧಾನಿ ಮೋದಿ. ಈಗ ಕೊರೊನಾ ನಿಯಂತ್ರಣದ ವೈಫಲ್ಯಕ್ಕೆ ಡಾ.ಹರ್ಷವರ್ಧನ್ ಎಂಬ ಆರೋಗ್ಯ ಸಚಿವರನ್ನು ಕಿತ್ತುಹಾಕಿದ್ದಾರಂತೆ. ನಿಜವಾಗಿ ಮೋದಿಯವರು ರಾಜೀನಾಮೆ ನೀಡಬೇಕಲ್ಲಾ" ಎಂದು ಹೇಳಿದ್ದಾರೆ.
"ಸಾಧನೆಯೇ ಮಾನದಂಡವಾಗಿದ್ದರೆ ಮೊದಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಿತ್ತುಹಾಕಬೇಕಿತ್ತಲ್ವಾ? ಆರೋಗ್ಯ ಕ್ಷೇತ್ರಕ್ಕಿಂತಲೂ ಹೆಚ್ಚಿನ ವೈಫಲ್ಯ ಆಗಿರುವುದು ಆರ್ಥಿಕ ಕ್ಷೇತ್ರದಲ್ಲಿ. ನೋಟ್ ಬ್ಯಾನ್, ಜಿಎಸ್ಟಿ, ಕೊರೊನಾ ಪರಿಹಾರ ಹೀಗೆ ಹಣಕಾಸು ಖಾತೆಗೆ ಸಂಬಂಧಿಸಿದ ವೈಫಲ್ಯಗಳಿಂದಾಗಿಯೇ ದೇಶ ದುಸ್ಥಿತಿಗೆ ಬಂದಿದೆ" ಎಂದು ದೂರಿದ್ದಾರೆ.
"ಬಹಳ ಮಂದಿ ಸಚಿವರನ್ನು ಕೈಬಿಟ್ಟಿರುವ ಸುದ್ದಿ ಕೇಳಿಯೇ ಅವರೆಲ್ಲ ಸಂಪುಟದಲ್ಲಿದ್ದರೆಂದು ದೇಶದ ಜನರಿಗೆ ಗೊತ್ತಾಗಿದ್ದು. ಇವರಲ್ಲಿ ಬಹಳಷ್ಟು ಮಂದಿ ಹೊಸಬರು. ದೇಶ ಎದುರಿಸುತ್ತಿರುವ ಇಂದಿನ ಸಂಕಷ್ಟದ ಕಾಲದಲ್ಲಿ ಈ ಹೊಸಬರು ಏನು ಮಾಡುತ್ತಾರೋ ಗೊತ್ತಿಲ್ಲ. ಸಾಮಾನ್ಯವಾಗಿ ಅಸಮರ್ಥರು ಅಸಮರ್ಥರನ್ನೇ ಆಯ್ಕೆ ಮಾಡಿಕೊಂಡು ಜೊತೆಯಲ್ಲಿಟ್ಟುಕೊಳ್ತಾರೆ" ಎಂದಿದ್ದಾರೆ.
"ಪ್ರಧಾನಿ ಮೋದಿ ಅವರು ಮೊದಲು ಅಧಿಕಾರಕ್ಕೆ ಬಂದಾಗ ‘Minimum Government Maximum Governence’ ಎಂಬ ಘೋಷಣೆ ಕೂಗುತ್ತಿದ್ದರು. ಈಗಿನ ಸಚಿವ ಸಂಪುಟದಲ್ಲಿ 77 ಸದಸ್ಯರಿದ್ದಾರೆ. ಇದೇನಾ Minimum Government?. ಹೇಳುವುದೊಂದು, ಮಾಡುವುದೊಂದು. ಇದಕ್ಕಾಗಿಯೇ ನಾನು ಮೋದಿಯವರ ಮನೆದೇವರೇ ಸುಳ್ಳು ಎಂದು ಹೇಳುತ್ತಿರುವುದು" ಎಂದು ತಿಳಿಸಿದ್ದಾರೆ.
"ಕರ್ನಾಟಕದ 6 ಕೇಂದ್ರ ಸಚಿವರಲ್ಲಿ ಹಿಂದುಳಿದ ಜಾತಿಗೆ ಸೇರಿದವರಿಲ್ಲ. ಮೂವರು ಬ್ರಾಹ್ಮಣರು ಹಾಗೂ ಒಕ್ಕಲಿಗ, ಲಿಂಗಾಯತ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ತಲಾ ಒಬ್ಬರು ಸಚಿವರಾಗಿದ್ದಾರೆ. ಯಾವ ಜಾತಿಗೆ ಕೊಟ್ಟರೂ ನನ್ನ ಆಕ್ಷೇಪ ಇಲ್ಲ. ಅರ್ಧಕ್ಕಿಂತ ಹೆಚ್ಚಿನ ಜನಸಂಖ್ಯೆಯ ಸಮುದಾಯಗಳಿಗೆ ಪ್ರಾತಿನಿಧ್ಯ ನಿರಾಕರಿಸುವುದು ಯಾವ ಸಾಮಾಜಿಕ ನ್ಯಾಯ?" ಎಂದು ಪ್ರಶ್ನಿಸಿದ್ದಾರೆ.
"ಕರ್ನಾಟಕದಿಂದ ಸಚಿವರು ಆರಾಗಲಿ, ಹನ್ನೆರಡಾಗಲಿ ಅದರಿಂದ ರಾಜ್ಯಕ್ಕೆ ಏನೂ ಲಾಭವಾಗದು ಎನ್ನುವುದು ಈಗಾಗಲೇ ಸಾಬೀತಾಗಿದೆ. ಹೊಸಬರಲ್ಲಿ ಯಾರೂ ಸಂಪುಟದರ್ಜೆಯ ಸಚಿವರಿಲ್ಲ. ಮಹತ್ವದ ಖಾತೆಗಳೂ ಇಲ್ಲ. ಮಹತ್ವದ ಖಾತೆಗಳನ್ನು ಕೊಟ್ಟರೂ ಇವರಿಗೆ ನಿಭಾಯಿಸುವ ಸಾಮರ್ಥ್ಯವೂ ಇಲ್ಲ ಎಂದು ಪ್ರಧಾನಿ ಮೋದಿ ಅವರಿಗೆ ಗೊತ್ತಾಗಿರಬೇಕು" ಎಂದಿದ್ದಾರೆ.
"ಈ ಸಂಪುಟ ವಿಸ್ತರಣೆ, ಪುನರ್ರಚನೆಯಿಂದ ರಾಜ್ಯಕ್ಕೆ ಯಾವ ಲಾಭವೂ ಇಲ್ಲ. ರಾಜ್ಯದ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರಿಗೆ ಪ್ರಧಾನ ಮಂತ್ರಿ ಎದುರು ಬಾಯಿಬಿಡುವ ಶಕ್ತಿ ಇಲ್ಲ, 25 ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ. ಹೀಗಿರುವಾಗ ಹೊಸದಾಗಿ ಸಚಿವ ಖಾತೆಯ ಕಿರೀಟ ಇಟ್ಟುಕೊಂಡು ಇವರೇನು ಮಾಡಬಹುದು?" ಎಂದು ಕೇಳಿದ್ದಾರೆ.