ರಾಮನಗರ, ಜು 08 (DaijiworldNews/PY): "ನಾನು ಅಂಬರೀಶ್ ಮುಂದೆ ಕೈಕಟ್ಟಿ ನಿಂತಿರುತ್ತಿದ್ದೆ. ಸಾರ್ವಜನಿಕರ ಮುಂದೆಯೂ ನಾನು ಕೈಕಟ್ಟಿ ನಿಲ್ಲುತ್ತೇನೆ. ಇವರೆಲ್ಲಾ ಹೇಳೋ ಹಾಗೇ ನಾನು ಅಂಬರೀಶ್ ಗುಲಾಮ ಆಗಿದ್ದೇನಾ?" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೇಳಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನೇನು ಅಂಬರೀಶ್ ಅವರ ಗುಲಾಮ ಆಗಿದ್ದೆನಾ?. ಜನಸಾಮಾನ್ಯರು ಬಂದರೂ ನಾನು ಕೈಕಟ್ಟಿ ನಿಲ್ಲುತ್ತೇನೆ. ಈ ವಿಚಾರವನ್ನು ದಯವಿಟ್ಟು ವೈಭವೀಕರಿಸುವುದು ಬೇಡ.ಕಳೆದ ಎರಡು ದಿನದ ಹಿಂದೆ ನಾನು ಹೇಳಿದ್ದ ಹೇಳಿಕೆ ಬಗ್ಗೆ ಸ್ಕೋಪ್ ಕೊಡುವ ಅವಶ್ಯಕತೆ ಇಲ್ಲ" ಎಂದಿದ್ದಾರೆ.
"ದೇಶ ಹಾಗೂ ರಾಜ್ಯದಲ್ಲಿ ಅನೇಕ ಸಮಸ್ಯೆಗಳಿದ್ದು, ಆ ಬಗ್ಗೆ ಮಾಧ್ಯಮದವರು ಗಮನಹರಿಸಬೇಕು. ಕುಮಾರಸ್ವಾಮಿ ಭ್ರಷ್ಟಾಚಾರ ವಿಚಾರದಲ್ಲಿ ಅಂಬಾಸಿಡರ್ ಎಂದು ಹೇಳಿದ್ದಾರೆ. ಹೌದು, ನಾನು ಭ್ರಷ್ಟಾಚಾರ ಅಂಬಾಸಿಡರ್. ನಾನು ಹಾಗೂ ನನ್ನ ಕುಟುಂಬ ಅನೇಕ ವರ್ಷಗಳಿಂದ ಭ್ರಷ್ಟಾಚಾರ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೇವೆ. ಭ್ರಷ್ಟ ಅಧಿಕಾರಿಗಳ ಹಾಗೂ ಭ್ರಷ್ಟಾಚಾರದ ವಿರುದ್ದ ದಾಖಲೆ ಸಮೇತವಾಗಿ ಹೋರಾಟ ನಡೆಸುತ್ತಿದ್ದೇವೆ" ಎಂದು ಹೇಳಿದ್ದಾರೆ.
"ಇದೀಗ ಆ ಹೆಣ್ಣು ಮಗಳ ಬಗ್ಗೆ ಚರ್ಚೆ ಬೇಡ. ನಾನು ಮುಂದಿನ ಚುನಾವಣೆ ವೇಳೆ ಮಾತನಾಡುತ್ತೇನೆ" ಎಂದಿದ್ದಾರೆ.