ನವದೆಹಲಿ, ಜು.08 (DaijiworldNews/HR): ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರ ಪರ ಕೆಲಸ ಮಾಡುವ ಜವಾಬ್ದಾರಿಯನ್ನು ನನಗೆ ನೀಡಿದ್ದು, ನಾನು ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ ಎಂದು ನೂತನ ಕೃಷಿ ಮತ್ತು ರೈತರ ಅಭಿವೃದ್ಧಿ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ರೈತರ ಪರವಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ನೀಡಿದ್ದು, ನಾನು ರೈತರ ಕಲ್ಯಾಣಕ್ಕಾಗಿ ಶ್ರಮಿಸಿ ಸರ್ಕಾರದ ಲಾಭಗಳು, ಯೋಜನೆಗಳು ರೈತರಿಗೆ ತಲುಪುವಂತೆ ಮಾಡುತ್ತೇನೆ" ಎಂದಿದ್ದಾರೆ.
ಇನ್ನು "ನಾನೊಬ್ಬ ರೈತನ ಮಗಳು ಹಾಗಾಗಿ ನನಗೆ ರೈತರ ನೋವು ನನಗೆ ತಿಳಿದಿದೆ. ರೈತರ ಕಲ್ಯಾಣಕ್ಕಾಗಿ ದುಡಿಯುತ್ತೇನೆ" ಎಂದಿದ್ದಾರೆ.
ರೈತರ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಅವರು, "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ಪ್ರತಿಭಟಿಸುತ್ತಿದ್ದು ಅವರೊಂದಿಗೆ ಸರ್ಕಾರ ಮಾತುಕತೆ ನಡೆಸಿದ್ದು, ಈಗಲೂ ಮಾತನಾಡಲು ಸಿದ್ಧವಿದ್ದು, ಸರ್ಕಾರ ರೈತರೊಂದಿಗಿದೆ ಎಂಬುದನ್ನು ನಾವು ದೇಶಕ್ಕೆ ತಿಳಿಸಬೇಕಿದೆ" ಎಂದು ಹೇಳಿದ್ದಾರೆ.
ಇನ್ನು ಬುಧವಾರ ಸಂಜೆಯಷ್ಟೇ ಮಂತ್ರಿಯಾಗಿ ಶೋಭಾ ಕರಂದ್ಲಾಜೆ ಪ್ರಮಾಣವಚನ ಸ್ವೀಕರಿಸಿದ್ದು, ಉಡುಪಿ - ಚಿಕ್ಕಮಗಳೂರು ಸಂಸದೆ ಶೋಭಾಗೆ ಇದೀಗ ಕೃಷಿ, ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಹುದ್ದೆ ನೀಡಲಾಗಿದೆ.