ಕಾರವಾರ, ಜು 08 (DaijiworldNews/PY): "ಕೇಂದ್ರ ಸಚಿವ ಸಂಪುಟದಿಂದ ಕೇಂದ್ರ ಆರೋಗ್ಯ ಸಚಿವರಾಗಿದ್ದ ಡಾ. ಹರ್ಷವರ್ಧನ್ ಅವರನ್ನು ಹೊರಗುಳಿಸಿರುವುದು ಸರ್ಕಾರ ಕೊರೊನಾ ಸೋಂಕನ್ನು ಸಮರ್ಥವಾಗಿ ನಿರ್ವಹಿಸಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಕಾರವಾರದಲ್ಲಿ ಮಾತನಾಡಿದ ಅವರು, "ಕೇಂದ್ರ ಸಚಿವ ಸಂಪುಟದಿಂದ ಹರ್ಷವರ್ಧನ್ ಅವರನ್ನು ಹೊರಗುಳಿಸಿರುವುದು ಕೇಂದ್ರ ಸರ್ಕಾರ ಕೊರೊನಾ ಸೋಂಕನ್ನು ಸಮರ್ಥವಾಗಿ ನಿರ್ವಹಿಸಿಲ್ಲ ಎನ್ನುವುದಕ್ಕೆ ಸಾಕ್ಷಿ. ಇದು ಹರ್ಷವರ್ಧನ್ ಅವರೊಬ್ಬರ ಜವಾಬ್ದಾರಿಯಲ್ಲ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಇವೆರಡರ ಜವಾಬ್ದಾರಿಯೂ ಆಗಿದೆ. ಕೊರೊನಾ ನಿರ್ವಹಣೆಯ ಜವಾಬ್ದಾರಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಬೇಕಿದೆ. ಎರಡು ಸರ್ಕಾರಗಳು ಜನರ ನೋವಿಗೆ ಸ್ಪಂದಿಸಬೇಕಾಗಿರುವುದು ಮುಖ್ಯ" ಎಂದಿದ್ದಾರೆ.
ಕೇಂದ್ರ ಸಚಿವ ಸಂಪುಟಕ್ಕೆ ಮುನ್ನ ಡಾ. ಹರ್ಷವರ್ಧನ್ ಅವರು ರಾಜೀನಾಮೆ ನೀಡಿದ್ದರು. ಇದರೊಂದಿಗೆ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್, ಬಾಬುಲ್ ಸುಪ್ರಿಯೋ, ಸದಾನಂದ ಗೌಡ, ದೇಬಶ್ರೀ ಚೌಧುರಿ, ಸಂಜಯ್ ಧೋತ್ರೆ, ರತನ್ ಲಾಲ್ ಕಟಾರಿಯಾ, ರಾವ್ ಸಾಹೇಬ್ ಧನ್ವೆ ಪಾಟೀಲ್ ಮತ್ತು ಪ್ರತಾಪ್ ಚಂದ್ರ ಸಾರಂಗಿ, ತವರ್ ಚಂದ ಗೆಹ್ಲೋಟ್ ಅವರು ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.