ಮಂಡ್ಯ, ಜು.08 (DaijiworldNews/HR): ಎಚ್ ಡಿ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಇದೀಗ ಇವರಿಬ್ಬರ ಜಗಳಕ್ಕೆ ಸಂಸದ ಪ್ರತಾಪ್ ಸಿಂಹ ಎಂಟ್ರಿ ಕೊಟ್ಟು ಎಚ್ಡಿಕೆ ಪರ ಬ್ಯಾಟಿಂಗ್ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, "ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದು ಅಧಿಕಾರಿಗಳೇ ತಿಳಿಸಿದ್ದು, ಅಂಥಹದರಲ್ಲಿ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋದು ಸರಿಯಲ್ಲ" ಎಂದು ಸಂಸದೆ ಸುಮಲತಾಗೆ ಪ್ರತಾಪ್ ಟಾಂಗ್ ಕೊಟ್ಟಿದ್ದಾರೆ.
ಇನ್ನು ಅಕ್ರಮ ಗಣಿಗಾರಿಕೆ ಸ್ಥಳಗಳಲ್ಲಿ ಸುಮಲತಾಗೆ ಅಡ್ಡಿ ಪಡಿಸಲಾಯಿತು ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್, "ಸುಮಲತಾ ಅವರ ಹೇಳಿಕೆಯನ್ನೇ ಮಾಧ್ಯಮದವರು ಸತ್ಯ ಎಂದು ಭಾವಿಸಬೇಡಿ. ಸತ್ಯದ ಆಳಕ್ಕೆ ಹೋಗಿ ತಿಳಿದುಕೊಳ್ಳುವ ಮನಸ್ಥಿತಿ ಮಾಧ್ಯಮದವರಿಗೆ ಇರಬೇಕು. ರಾಜಕೀಯವಾಗಿ ಯಾರು ಏನು ಬೇಕಾದರೂ ಹೇಳಿಕೆ ಕೊಡಬಹುದು. ಯಾರೊಬ್ಬರೂ ಎಲ್ಲಿಯೂ ಅಡ್ಡಿ ಪಡಿಸಿಲ್ಲ. ಇದೊಂದು ರಾಜಕೀಯ ಅಷ್ಟೇ" ಎಂದಿದ್ದಾರೆ.