ನವದೆಹಲಿ, ಜು. 07 (DaijiworldNews/SM): ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಸರ್ಜರಿಯಾಗಿದ್ದು, ನೂತನ ಸಚಿವರು ಸಂಪುಟಕ್ಕೆ ಎಂಟ್ರಿ ಪಡೆದುಕೊಂಡಿದ್ದಾರೆ. ಕರ್ನಾಟಕದಿಂದ ರಾಜೀವ್ ಚಂದ್ರಶೇಖರ್ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗ ಕ್ಷೇತ್ರದ ಸಂಸದ ಎ. ನಾರಾಯಣ ಸ್ವಾಮಿ, ಬೀದರ್ ಸಂಸದ ಭಗವಂತ ಖೂಬಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ನೂತನ ಸಚಿವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಜ್ಞಾ ವಿಧಿ ಬೋಧಿಸಿದರು.
ರಾಜೀವ್ ಚಂದ್ರಶೇಖರ್ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಮತ್ತೊಂದೆಡೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಕೂಡಾ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ಹಿರಿಯ ಮುಖಂಡೆಯಾಗಿರುವ ಶೋಭಾ ಕರಂದ್ಲಾಜೆ 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಸಂಸದೆಯಾಗಿ ಆಯ್ಕೆಗೊಂಡಿದ್ದರು. ಅಲ್ಲದೆ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವೆಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.
ಚಿತ್ರದುರ್ಗ ಕ್ಷೇತ್ರದ ಸಂಸದ ಎ. ನಾರಾಯಣ ಸ್ವಾಮಿ ಕೂಡಾ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕೃಷಿ, ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ನಾರಾಯಣ ಸ್ವಾಮಿ 2019ರಲ್ಲಿ ಸ್ಪರ್ಧಿಸಿದ ಮೊದಲ ಲೋಕಸಭಾ ಚುನಾವಣೆಯಲ್ಲೇ ಸಂಸದರಾಗಿ ಆಯ್ಕೆಯಾಗಿದ್ದರು. ಇದೀಫ಼ ಮೊದಲ ಅವಧಿಯಲ್ಲೇ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ಬೀದರ್ ಸಂಸದ ಭಗವಂತ ಖೂಬಾ ಕೃಷಿಕರಾಗಿದ್ದು, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದವರು. ಇದೀಗ ಕೇಂದ್ರ ಸಚಿವರಾಗಿ ಖೂಬಾ ಪ್ರಮಾಣ ಸ್ವೀಕರಿಸಿದ್ದಾರೆ.