ಕೋಲ್ಕತ್ತಾ, ಜು 07 (DaijiworldNews/PY): ಟಿಎಂಸಿ ನಾಯಕಿ ಹಾಗೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕೋಲ್ಕತ್ತಾ ಹೈಕೋರ್ಟ್ 5 ಲಕ್ಷ ರೂ.ಗಳ ದಂಡ ವಿಧಿಸಿದೆ.
ಸಿಎಂ ಮಮತಾ ಬ್ಯಾನರ್ಜಿ ಅವರು, ಬಿಜೆಪಿಯ ಸುವೇಂದು ಅಧಿಕಾರಿ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆಯಿಂದ ಹಿಂದೆ ಸರಿಯುವಂತೆ ನ್ಯಾಯಮೂರ್ತಿಗಳನ್ನು ಕೇಳಿದ್ದಕ್ಕೆ ಕೋರ್ಟ್ ಈ ಆದೇಶ ಹೊರಡಿಸಿದೆ.
ಮಮತಾ ಅವರಿಗೆ ನ್ಯಾಯಾಧೀಶ ಕೌಶಿಕ್ ಚಂದಾ ಅವರು ದಂಢ ವಿಧಿಸಿದ್ದಾರೆ.
ಪ್ರಕರಣದಿಂದ ನಿರ್ಗಮಿಸುವ ಮುನ್ನ ನ್ಯಾಯಾಧೀಶರು, "ನ್ಯಾಯಾಧೀಶರನ್ನು ಕೆಣಕುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಪೂರ್ವಯೋಜಿತ ಕ್ರಮದೊಂದಿಗೆ ಸಾಂವಿಧಾನಿಕ ಕರ್ತವ್ಯವನ್ನು ಉಲ್ಲಂಘನೆ ಮಾಡಿದ್ದಾರೆ" ಎಂದು ದೂರಿದ್ದಾರೆ.
"ನ್ಯಾಯಾಂಗವನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸಲು ಮಮತಾ ಬ್ಯಾನರ್ಜಿ ಯತ್ನಿಸಿದ್ದರಿಂದ ಅವರಿಗೆ 5 ಲಕ್ಷ ದಂಡ ವಿಧಿಸಲಾಗಿದೆ. ಪಶ್ಚಿಮ ಬಂಗಾಳ ಸಿಎಂ ದಂಡದಲ್ಲಿ ಪಾವತಿಸಿದ ಮೊತ್ತವನ್ನು ಕೊರೊನಾ ಪೀಡಿತ ವಕೀಲರ ಕುಟುಂಬಗಳಿಗೆ ಬಳಕೆ ಮಾಡಲಾಗುವುದು" ಎಂದು ಕೋಲ್ಕತ್ತಾ ಹೈಕೋರ್ಟ್ ಹೇಳಿದೆ.