ಕೊಲ್ಲಂ ಜು 07 (DaijiworldNews/MS): ಶಿವಗಿರಿ ಮಠದ ಮಾಜಿ ಮುಖ್ಯಸ್ಥರಾಗಿದ್ದ ಸ್ವಾಮಿ ಪ್ರಕಾಶಾನಂದ ಬುಧವಾರ ಬೆಳಿಗ್ಗೆ ವರ್ಕಲಾ ಶ್ರೀ ನಾರಾಯಣ ಮಿಷನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 99 ವರ್ಷ ವಯಸ್ಸಾಗಿತ್ತು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಶ್ರೀ ನಾರಾಯಣ ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಅಂತಿಮ ವಿಧಿಗಳು ಬುಧವಾರ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.
1922 ರ ಡಿಸೆಂಬರ್ನಲ್ಲಿ ಪಿರವತ್ತೂರು ಕಳತ್ತರಡಿ ಮನೆತನದಲ್ಲಿ ಜನಿಸಿದ ಸ್ವಾಮಿ ಪ್ರಕಾಶಾನಂದ ಅವರ ಪೂರ್ವಾಶ್ರಮದಲ್ಲಿ ಕುಮಾರನ್ ಎಂಬ ಹೆಸರಿತ್ತು. ಶ್ರೀ ನಾರಯಣ ಗುರುಗಳ ವಿಚಾರಧಾರೆಗಳಿಂದ ಆಕರ್ಷಿತರಾಗಿ ಅವರು ತಮ್ಮ 22 ನೇ ವಯಸ್ಸಿನಲ್ಲಿ ಶಿವಗಿರಿ ಮಠಕ್ಕೆ ಸೇರಿದ್ದರು. ಅಂದು ಮಠಾಧಿಪತಿಯಾಗಿದ್ದ ಸ್ವಾಮಿ ಶಂಕರಾನಂದರ ಶಿಷ್ಯರಾಗಿ ಆಧ್ಯಾತ್ಮಿಕ ವಿಧ್ಯಾಭ್ಯಾಸ ಪೂರೈಸಿದರು. 35 ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು. 2006 ರಲ್ಲಿ ಸ್ವಾಮಿ ಅವರು ಮಠಾಧೀಶರಾಗಿ ಹತ್ತು ವರ್ಷಗಳ ಕಾಲ ಈ ಸ್ಥಾನದಲ್ಲಿ ಮುಂದುವರಿದರು.
ಅವರ ಆಡಳಿತಾವಧಿಯಲ್ಲಿ ವಾರ್ಷಿಕವಾಗಿ ನಡೆಯುವ ಶಿವಗಿರಿ ತೀರ್ಥಯಾತ್ರೆಯನ್ನು ಅಂತರರಾಷ್ಟ್ರೀಯ ಆಧ್ಯಾತ್ಮಿಕ ಕಾರ್ಯಕ್ರಮವನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಇಷ್ಟೇ ಅಲ್ಲದೆ ಅವರ ಅಧಿಕಾರಾವಧಿಯಲ್ಲಿ ಹಲವಾರು ವ್ಯಕ್ತಿಗಳು ಶಿವಗಿರಿಗೆ ಭೇಟಿ ನೀಡಿದ್ದರು.2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಠಕ್ಕೆ ಭೇಟಿ ನೀಡಿದ್ದರು