ಬೆಳಗಾವಿ, ಜು 07 (DaijiworldNews/PY): ಬುಧವಾರ ಸಂಜೆ ಕೇಂದ್ರ ಸಂಪುಟ ಪುನರ್ನರಚನೆಯಾಗಲಿದ್ದು, ಎಲ್ಲರ ಚಿತ್ತ ಕೇಂದ್ರ ಸಂಪುಟ ವಿಸ್ತರಣೆಯತ್ತ ಇದೆ.
ಕರ್ನಾಟಕದಿಂದ ಹಲವು ಸಂಸದರು ತಮಗೂ ಸಂಪುಟದಲ್ಲಿ ಸ್ಥಾನ ದೊರೆಯಲ್ಲಿದೆ ಎನ್ನುವ ವಿಶ್ವಾಸಹೊಂದಿದ್ದು, ಹಾಗಾಗಿ ಪ್ರಧಾನಿ ಕಚೇರಿಯ ಕರೆಗಾಗಿ ನಿರೀಕ್ಷಿಸುತ್ತಿದ್ದಾರೆ. ಈಗಾಗಲೇ ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ ಹಾಗೂ ರಮೇಶ್ ಜಿಗಜಿಣಗಿ ಅವರು ದೆಹಲಿಗೆ ತೆರಳಿದ್ದಾರೆ.
ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಮುಖಗಳಿಗೆ ಅವಕಾಶ ನೀಡಲಿದ್ದಾರೆ ಎನ್ನಲಾಗಿದೆ. ಯುವಕರು, ಆಡಳಿತದಲ್ಲಿ ಅನುಭವವಿರುವವರಿಗೆ ಹಾಗೂ ವಿದ್ಯಾವಂತರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
"ನನಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವ ವಿಚಾರವಾಗಿ ಖಚಿತತೆ ಸಿಕ್ಕಿಲ್ಲ. ಹಿರಿಯ ಸಚಿವರೋರ್ವರು ನನಗೆ ಕರೆ ಮಾಡಿದ್ದು, ದೆಹಲಿಗೆ ಬರುವಂತೆ ತಿಳಿಸಿದ್ದಾರೆ. ಆದರೆ, ನನಗೆ ಪ್ರಧಾನಿ ಕಚೇರಿಯಿಂದ ಯಾವುದೇ ಕರೆ ಬಂದಿಲ್ಲ" ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.
ಹಿರಿಯ ಸಂಸದರನ್ನು ಹೊರತುಪಡಿಸಿ, ಶೋಭಾ ಕರಂದ್ಲಾಜೆ ಹಾಗೂ ಪ್ರತಾಪ್ ಸಿಂಹ ಅವರು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಆದರೆ, ಅವರಿಗೆ ದೆಹಲಿಯಿಂದ ಕರೆ ಬಂದಿದೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಕರ್ನಾಟಕದ ಇನ್ನೋರ್ವ ಸಂಸದರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಿವಮೊಗ್ಗ ಸಂಸದ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರಿಗೂ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.
"ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅವರಿಗೆ ಹಿರಿಯ ಸಚಿವರು ಕರೆ ಮಾಡಿದ್ದರು" ಎಂದು ಜಿಗಜಿಣಗಿ ಹೇಳಿದ್ದಾರೆ. ಹಿಂದಿನ ಮೋದಿ ಸರ್ಕಾರದಲ್ಲಿ ರಮೇಶ್ ಜಿಗಜಿಣಗಿ ಅವರು ಐದು ಬಾರಿ ಸಂಸದರಾಗಿದ್ದು, ಅವರು ನೀರು ಹಾಗೂ ನೈರ್ಮಲ್ಯೀಕರಣ ಖಾತೆಯನ್ನು ನಿರ್ವಹಿಸುತ್ತಿದ್ದರು. ಅವರ ಅನುಭವ ಕಾರಣದಿಂದ ಅವರು ಮತ್ತೆ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.