ನವದೆಹಲಿ, ಜು 07 (DaijiworldNews/MS): ಭಾರತೀಯ ಚಿತ್ರರಂಗದ ಖ್ಯಾತ ನಟ ದಿಲೀಪ್ ಕುಮಾರ್ ನಿಧನರಾಗಿದ್ದಾರೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಅವರಿಗೆ ಮುಂಬೈನ ಪಿಡಿ ಹಿಂದುಜ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜು.೦೭ರ ಬುಧವಾರ ಇಹಲೋಕ ತ್ಯಜಿಸಿದ್ದಾರೆ. ಭಾರತ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತರಾಗಿದ್ದ ದಿಲೀಪ್ ಕುಮಾರ್ ರಾಜ್ಯಸಭೆ ಸದಸ್ಯರೂ ಆಗಿದ್ದರು.
ದಿಲೀಪ್ ಕುಮಾರರ ಹುಟ್ಟು ಹೆಸರು ಮಹಮ್ಮದ್ ಯೂಸುಫ್ ಖಾನ್. ಈಗ ಪಾಕಿಸ್ತಾನದಲ್ಲಿರುವ ಪೇಶಾವರದ ಕಿಸ್ಸಾ ಖ್ವಾನಿ ಬಜಾರಿನ ಮೊಹಲ್ಲಾ ಖುದಾದಾದದಲ್ಲಿ ಇವರು 11 ಡಿಸೆಂಬರ್ 1922ರಂದು ಜನಿಸಿದ್ದರು. ಪತ್ನಿ ಸಾಯಿರಾ ಬಾನು ಜೊತೆ ತುಂಬು ಜೀವನ ನಡೆಸಿದ ದಿಲೀಪ್ ಕುಮಾರ್ ಫಿಲ್ಮ್ಫೇರ್ ಪ್ರಶಸ್ತಿ ಆರಂಭವಾದಾಗ ಅದನ್ನು ಪಡೆದ ಮೊದಲ ವ್ಯಕ್ತಿ ದಿಲೀಪ್ ಕುಮಾರ್ ಅವರಾಗಿದ್ದರು.
ಇತ್ತೀಚೆಗಷ್ಟೇ ದಿಲೀಪ್ ಅವರು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿ ಬಳಿಕ ಚೇತರಿಸಿಕೊಂಡು ಮನೆಗೆ ಮರಳಿದ್ದರು. ಮತ್ತೆ ಅನಾರೋಗ್ಯ ಉಲ್ಬಣಿಸಿದ ಕಾರಣ ಆಸ್ಪತ್ರೆ ದಾಖಲಾಗಿದ್ದರು. ದಿಲೀಪ್ ಅವರ ಅಂತಿಮಸಂಸ್ಕಾರವನ್ನು ಸಾಂಟ್ರಾಕ್ರೂಜ್ ಚಿತಾಗಾರದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
1944ರಲ್ಲಿ ಜ್ವರ್ ಭಾತಾ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ದಿಲೀಪ್ ಅಂದಾಜ್, ದಾಗ್, ದೇವದಾಸ್, ಆಜಾದ್, ಶಕ್ತಿ, ಮಸಾಲ್, ಸೌದಾಗರ್, ಕ್ರಾಂತಿ, ಮಘಲ್ ಎ ಆಜಮ್ ಮುಂತಾದ ಚಿತ್ರಗಳಿಂದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.