ಕೊಚ್ಚಿ, ಜು 06 (DaijiworldNews/MS): ಕೊಚ್ಚಿ ನೌಕಾ ನೆಲೆಯಲ್ಲಿ ಮಂಗಳವಾರ ಮುಂಜಾನೆ 19 ವರ್ಷದ ನಾವಿಕರೊಬ್ಬರು ಗುಂಡೇಟಿನ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶದ ಅಲಿಘರ್ ನಿವಾಸಿ ತುಷಾರ್ ಅತ್ರಿ ಎಂದು ಗುರುತಿಸಲಾಗಿದೆ. ನೌಕಾ ನೆಲೆಯ ಗಡಿ ಗೋಡೆಯ ಉದ್ದಕ್ಕೂ ಇರುವ ಭದ್ರತಾ ಪೋಸ್ಟ್ಗಳ ಬಳಿ ನಾವಿಕ ಶವವಾಗಿ ಪತ್ತೆಯಾಗಿದ್ದಾನೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ನೌಕಾಪಡೆ ವಿಚಾರಣೆಗೆ ಆದೇಶಿಸಿದೆ ಎಂದು ತಿಳಿದುಬಂದಿದೆ.
ನೌಕಾ ನೆಲೆಯಲ್ಲಿ ಭದ್ರತಾ ಕರ್ತವ್ಯಕ್ಕಾಗಿ ನಾವಿಕನನ್ನು ನಿಯೋಜಿಸಲಾಗಿತ್ತು. ತುಷಾರ್ ಅತ್ರಿ ಸುಮಾರು ಒಂದು ವರ್ಷದಿಂದ ನೌಕಾನೆಲೆಯಲ್ಲಿ ಸೇವೆಯಲ್ಲಿದ್ದಾರೆ. ಸೋಮವಾರ, ಅವರನ್ನು ನೌಕಾ ನೆಲೆಯ ಪ್ಯಾರಾಮೀಟರ್ ಪೋಸ್ಟ್ ಗಳಲ್ಲಿ ಕರ್ತವ್ಯಕ್ಕಾಗಿ ನೇಮಿಸಲಾಗಿತ್ತು. ಮುಂಜಾನೆ 2.30 ರ ಸುಮಾರಿಗೆ ವಾಡಿಕೆಯಂತೆ ತಪಾಸಣಾ ತಂಡವು ತೆರಳಿದಾಗ ಅತ್ರಿ ನೆಲದ ಮೇಲೆ ಬಿದ್ದಿರುವುದನ್ನು ಕಂಡುಬಂದಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಎರ್ನಾಕುಲಂ ಬಂದರು ಪೊಲೀಸರು ಅಸಹಜ ಸಾವು ಎಂಬುದಾಗಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.