ಮೈಸೂರು, ಜು. 6 (DaijiworldNews/HR): "ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದವರು ಮಾಡಿರುವ ಭ್ರಷ್ಟಾಚಾರ ಕರ್ಮಕಾಂಡದ ಎಲ್ಲಾ ದಾಖಲೆಗಳು ನಮ್ಮ ಬಳಿ ಇದೆ ಆದರೆ ನಾವೂ ಬಿಡುಗಡೆ ಮಾಡ್ತಾ ಇಲ್ಲ. ನಿಮ್ಮ ಹಿತದೃಷ್ಠಿ, ನಿಮ್ಮ ಕುಟುಂಬದ ಹಿತದೃಷ್ಠಿಯಿಂದ ನೀವೇ ಗೌರವಯುತವಾಗಿ ನಿವೃತ್ತಿಯಾಗಿ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೋರಾಟಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದ್ದು, ಬಾಯಿ ಮಾತಿನಲ್ಲಿ ಹೋರಾಟ ಎನ್ನುವುದಕ್ಕಿಂತ, ದಾಖಲೆ ಮೂಲಕವೇ ಉತ್ತರ ನೀಡುತ್ತೇನೆ. ನನ್ನ ರಾಜಕೀಯ ಜೀವನ ಅಂತ್ಯವಾದ್ರೂ ಪರವಾಗಿಲ್ಲ, ನಾನು ನನ್ನ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಮುಂದುವರೆಸುತ್ತೇನೆ" ಎಂದಿದ್ದಾರೆ.
ಇನ್ನು "ಪ್ರಧಾನಿ ಮೋದಿಯವರು ಸಂಪುಟ ಸಭೆಯನ್ನು 4 ಗಂಟೆ ನಡೆಸಿದ್ರೆ ಅದೇ ಯಡಿಯೂರಪ್ಪ ಅವರು 30 ನಿಮಿಷದಲ್ಲೇ ಮುಗಿಸುತ್ತಿದ್ದಾರೆ ಅಂದ್ರೇ, ಯಡಿಯೂರಪ್ಪ ನಿಷ್ಕ್ರೀಯರಾಗಿದ್ದಾರೆ ಎಂದೇ ಅರ್ಥ" ಎಂದರು.
"ವಿಜಯೇಂದ್ರ ಗ್ರಾಮ ಪಂಚಾಯ್ತಿ ಸದಸ್ಯ ಕೂಡ ಅಲ್ಲ. ಆದರೂ ಕೂಡ ಅವರ ಮುಂದೆ ಕೆಲವರು ಕೈಕಟ್ಟಿ ನಿಲ್ಲುತ್ತಾರೆ. ನನ್ನ ಭ್ರಷ್ಟಾಚಾರದ ವಿರುದ್ಧದ ಹೋರಾಟ ನಿಲ್ಲುವುದಿಲ್ಲ. ದಾಖಲೆ ಸಹಿತ ಬಿಡುಗಡೆ ಮಾಡೋ ಮುನ್ನಾ ಯಡಿಯೂರಪ್ಪನವೇ ಗೌರವಯುತವಾಗಿ ರಾಜಕೀಯ ನಿವೃತ್ತಿ ಘೋಷಿಸಿ" ಎಂದು ಆಗ್ರಹಸಿದ್ದಾರೆ.