ಚಿಕ್ಕೋಡಿ,ಜು. 6 (DaijiworldNews/HR): ನನ್ನ ಕಾರು ಅಪಘಾತಕ್ಕೀಡಾದಾಗ ನಾನು ಆ ಕಾರಿನಲ್ಲಿ ಇರಲೇ ಇಲ್ಲ, ನನ್ನ ವಿರುದ್ಧ ಕೇಳಿಬಂದಿರುವ ಆರೋಪಗಳೆಲ್ಲ ಸುಳ್ಳು ಎಂದು ಡಿಸಿಎಂ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ ಹೇಳಿದ್ದಾರೆ.
ಚಿದಾನಂದ ಸವದಿ ಮಾಲೀಕತ್ವದ ಕಾರು ಹುನಗುಂದ ತಾಲೂಕಿನ ಕೂಡಲ ಸಂಗಮ ಕ್ರಾಸ್ ಬಳಿ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಮೃತಪಟ್ಟಿದ್ದಾನೆ. ಈ ವೇಳೆ ಕಾರಿನಲ್ಲಿ ಚಿದಾನಂದ ಸವದಿ ಇದ್ದರು. ಆದರೂ ತಾನು ಇರಲೇ ಇಲ್ಲ ಎಂದು ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಚಿದಾನಂದ ಸವದಿ, "ನಾನು ಮತ್ತು ನಮ್ಮ ಸ್ನೇಹಿತರು ಅಂಜನಾದ್ರಿ ಬೆಟ್ಟಕ್ಕೆ ದೇವರ ದರ್ಶನಕ್ಕೆ ಹೋಗಿದ್ವಿ. ನನ್ನ ಕಾರಿನಲ್ಲಿ ನನ್ನ ಸ್ನೇಹಿತರು ಮತ್ತು ಡ್ರೈವರ್ ಬರುವ ಸಮಯದಲ್ಲಿ ಅಪಘಾತವಾಗಿದೆ. ನಾನಿದ್ದ ಕಾರಿಗೂ ಮತ್ತು ಅಪಘಾತವಾದ ಕಾರಿಗೂ 3೦ಕಿಮೀ ಅಂತರವಿತ್ತು. ಡ್ರೈವರ್ ನನಗೆ ಫೋನ್ ಮಾಡಿ ಅಪಘಾತವಾದ ಬಗ್ಗೆ ಮಾಹಿತಿ ನೀಡಿದ್ದು, ತಕ್ಷಣ ನಾನು ಫೋನ್ ಮಾಡಿ ಆಂಬುಲೆನ್ಸ್ ತರಿಸಿ ಬಾಗಲಕೋಟೆ ಎಸ್ಪಿ, ಡಿವೈಎಸ್ಪಿ, ಸಿಪಿಐಗೆ ಮಾಹಿತಿ ನೀಡಿದೆ. ಆದರೆ ನಾನು ರಿಟರ್ನ್ ಬರುವಷ್ಟರಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಯಾರೂ ಇರಲಿಲ್ಲ ಎಂದಿದ್ದಾರೆ.
ಇನ್ನು ಬೈಕ್ ಸವಾರ ಸಡನ್ ಆಗಿ ಬಂದಿದ್ದರಿಂದ ಕಾರು ನಿಯಂತ್ರಣಕ್ಕೆ ಬಾರದೆ ಅಪಘಾತ ಸಂಭವಿಸಿದೆ. ಅಪಘಾತವಾದ ವ್ಯಕ್ತಿಯನ್ನು ಭೇಟಿ ಮಾಡಬೇಕೆಂದು ನಾನು ಆಸ್ಪತ್ರೆಯತ್ತ ಹೋಗುವಷ್ಟರಲ್ಲಿ 'ಅವರು ಡೆತ್ ಆದರು' ಎಂದು ಫೋನ್ ಬಂತು. ಆಸ್ಪತ್ರೆಗೆ ಹೋದಾಗ ಅವರ ಕುಟುಂಬಸ್ಥರು ಯಾರೂ ಅಲ್ಲಿ ಇರಲಿಲ್ಲ. ಹೀಗಾಗಿ ಅವರನ್ನು ನಾನು ಭೇಟಿ ಮಾಡಲಾಗಲಿಲ್ಲ ಎಂದರು.
ನಾನು ಕಳೆದ 10 ವರ್ಷದಿಂದ ಡ್ರೈವಿಂಗ್ ಮಾಡುತ್ತಿಲ್ಲ. ನನ್ನ ಡ್ರೈವರ್ ಡ್ರೈವ್ ಮಾಡುತ್ತಾನೆ. ಅಪಘಾತ ನಡೆದ ಸ್ಥಳದಲ್ಲಿ ನಾನು ಯಾವ ಸ್ಥಳೀಯರೊಂದಿಗೂ ಮಾತನಾಡಿದಲ್ಲ. ನಾನು ಡಿಸಿಎಂ ಮಗ ಅಂತ ಯಾರಿಗೂ ಹೇಳಿಲ್ಲ. ಅಪಘಾತಕ್ಕೀಡಾದ ವ್ಯಕ್ತಿಯನ್ನ ಆಸ್ಪತ್ರಗೆ ಕಳಿಸಿದ್ದೂ ನಾವೇ. ಅವರ ಅಂತ್ಯ ಸಂಸ್ಕಾರದ ಬಳಿಕ ಕುಟುಂಬಸ್ಥರನ್ನು ಭೇಟಿ ಮಾಡುವೆ. ಅವರ ನಿಧನದ ದುಃಖವನ್ನ ಸಹಿಸುವ ಶಕ್ತಿ ಭಗವಂತ ಕುಟುಂಬಸ್ಥರಿಗೆ ನೀಡಲಿ ಎಂದು ಹೇಳಿದ್ದಾರೆ.
ಇನ್ನು ಅಪಘಾತದ ಕಾರಲ್ಲಿ ನನ್ನ ಮಗ ಚಿದಾನಂದ ಇರಲಿಲ್ಲ, ಸ್ನೇಹಿತರಿರುವ ಗಾಡಿ ಅಪಘಾತಕ್ಕಿಡಾಗಿದ್ದು, ಮಗನೇ ಅಂಬ್ಯುಲೆನ್ಸ್ ಫೋನ್ ಮಾಡಿ ಆಸ್ಪತ್ರೆ ಸೇರಿಸಿದ್ದಾನೆ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಡಿಸಿಎಂ ಲಕ್ಷಣ ಸವದಿ ಸ್ಪಷ್ಟನೆ ನೀಡಿದ್ದಾರೆ.