ಬೆಂಗಳೂರು, ಜು. 6 (DaijiworldNews/HR): ಕರ್ನಾಟಕದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮೇಲುಗೈ ಸಾಧಿಸಿದ್ದು, ಮುಂದಿನ ಜನವರಿಯಲ್ಲಿ ಶಾಸಕ ಎನ್ ಎ ಹ್ಯಾರಿಸ್ ಅವರ ಪುತ್ರ ಮಹಮದ್ ನಲಪಾಡ್ಗೆ ಪಟ್ಟ ಸಿಗಲಿದೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಈ ಕುರಿತು ಅಧಿಕೃತ ಪ್ರಕಟನೆ ಹೊರಡಿಸಿದ್ದು, ರಕ್ಷಾ ರಾಮಯ್ಯ 2022ರ ಜ. 31ರ ವರೆಗೆ ಅಧ್ಯಕ್ಷರಾಗಿರಲಿದ್ದು, ಆ ಬಳಿಕ ಮಹಮದ್ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.
ಕಳೆದ ವಾರ ರಾಜಿ ಸಂಧಾನ ಏರ್ಪಟ್ಟು ಡಿಸೆಂಬರ್ವರೆಗೆ ರಕ್ಷಾ ರಾಮಯ್ಯ ಅಧ್ಯಕ್ಷರಾಗಿ ಮುಂದುವರಿಯಲಿದ್ದು, ಬಳಿಕ ನಲಪಾಡ್ಗೆ ಅಧಿಕಾರ ಬಿಟ್ಟುಕೊಡುವ ಬಗ್ಗೆ ಒಪ್ಪಂದವಾಗಿತ್ತು. ಆದರೆ ಆ ಬಳಿಕ ರಾಷ್ಟ್ರೀಯ ಯುವ ಕಾಂಗ್ರೆಸ್ ವೆಬ್ಸೈಟ್ನಲ್ಲಿ ಇದು ಸತ್ಯಕ್ಕೆ ದೂರ ಎಂದು ಸ್ಪಷ್ಟನೆ ನೀಡಲಾಗಿತ್ತು.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಣ ಹೈಕಮಾಂಡ್ ಮೇಲೆ ಒತ್ತಡ ಹೇರಿ ರಕ್ಷಾ ಮುಂದುವರಿಯುವಂತೆ ನೋಡಿಕೊಂಡಿತ್ತು. ಆದರೆ ಡಿ.ಕೆ.ಶಿ. ಪಟ್ಟುಬಿಡದೆ ಮಹಮದ್ ನಲಪಾಡ್ಗೆ ಅಧ್ಯಕ್ಷಗಿರಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.