ಕೋಲ್ಕತ್ತಾ, ಜು. 05 (DaijiworldNews/SM): ದೇಶದಲ್ಲಿ ಇಂಧನ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇದರ ವಿರುದ್ಧ ಜನಸಾಮಾನ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶಗೊಂಡಿದ್ದು, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಜುಲೈ 05ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸರಾಸರಿ 31 ರಿಂದ 39 ಪೈಸೆ ಏರಿಕೆಯಾಗಿದೆ. ನಿರಂತರ ದರ ಏರಿಕೆ ಹಿನ್ನೆಲೆ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಇಂಧನ ದರ ಏರಿಕೆಯನ್ನು "ಕ್ರೂರ" ಎಂದು ಕರೆದಿರುವ ಮಮತಾ ಬ್ಯಾನರ್ಜಿ, "ದರ ಏರಿಕೆ ಜನರಿಗೆ ದೊಡ್ಡ ಸಂಕಟ ತಂದಿದೆ. ಮೇ ತಿಂಗಳಿನಿಂದ ಇಂಧನ ದರವನ್ನು ಎಂಟು ಬಾರಿ ಏರಿಕೆ ಮಾಡಲಾಗಿದೆ. ಜೂನ್ ತಿಂಗಳೊಂದರಲ್ಲಿಯೇ ಆರು ಬಾರಿ ಬೆಲೆ ಏರಿಕೆ ಮಾಡಲಾಗಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.