ಹೈದರಾಬಾದ್, ಜು 05 (DaijiworldNews/PY): ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ಸಮುದಾಯ ವಸತಿ ಸಮುಚ್ಛಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಂದರ್ಭ ಒಂದು ವೇಳೆ ತಾಳ್ಮೆ ಕಳೆದುಕೊಂಡು ರಿಬ್ಬನ್ ಅನ್ನು ಎಳೆದು ಬಿಸಾಡಿದ ಘಟನೆ ಸೋಮವಾರ ನಡೆದಿದೆ.
ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ತಂಗಲ್ಲಪಲ್ಲಿ ಮಂಡಲದ ಮೆಡಿಪಲ್ಲಿಯಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಸಮುದಾಯ ಹೌಸಿಂಗ್ ಕಟ್ಟಡದ ಉದ್ಘಾಟನೆಗೆ ತೆರಳಿದ್ದ ಸಿಎಂ ಕೆ ಚಂದ್ರಶೇಖರ್ ರಾವ್ ಕಟ್ಟಡದ ರಿಬ್ಬನ್ ಕತ್ತರಿಸಬೇಕಿತ್ತು. ಆದರೆ, ಈ ಸಂದರ್ಭ ಕಾರ್ಯಕ್ರಮದ ಆಯೋಜಕರು ಕತ್ತರಿ ಸಿಗದೇ ಪರದಾಡಿದ ಸ್ಥಿತಿ ಎದುರಾಗಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ರಿಬ್ಬನ್ ಅನ್ನು ಹಿಡಿದುಕೊಂಡು ಎಳೆದು ಬಿಸಾಡಿ, ಮಕ್ಕಳಿಗೆ ಒಳಗೆ ತೆರಳುವಂತೆ ಹೇಳಿದ್ದಾರೆ.
ಬಡವರಿಗೆ ನಿವೇಶನ ಕಲ್ಪಿಸುವ ಸಲುವಾಗಿ ಸಿರ್ಸಿಲ್ಲಾದಲ್ಲಿ ತೆಲಂಗಾಣ ಸರ್ಕಾರ ಸುಮಾರು 1,320 ಫ್ಲಾಟ್ಗಳನ್ನು ನಿರ್ಮಿಸಿದೆ. ಇದಕ್ಕೆ ಕೆಸಿಆರ್ ನಗರ ಎಂದು ನಾಮಕರಣ ಮಾಡಲಾಗಿದ್ದು, ಈ ಫ್ಲಾಟ್ಗಳನ್ನು 80 ಕೋಟಿ. ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.
"ಪ್ರತಿಯೊಂದು ಫ್ಲಾಟ್ಗಳು 560 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಕೆಸಿಆರ್ ನಗರದಲ್ಲಿ ಸುಮಾರು 5,000 ಮಂದಿಗೆ ವಾಸಿಸಲು ಸೌಲಭ್ಯವಿದೆ" ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.