ಹಾವೇರಿ, ಜು 05 (DaijiworldNews/PY): "ಕಾಂಗ್ರೆಸ್ ಇಂದು ಮುಳುಗುತ್ತಿರುವ ಹಡಗು. ಆ ಹಡಗಿನಲ್ಲಿ ತೂತು ಬಿದ್ದಿದೆ. ಒಳಗಡೆ ನೀರು ಸೇರುತ್ತಿದೆ. ಉಳಿಸಿಕೊಳ್ಳುವ ಎಲ್ಲಾ ಯತ್ನ ಮಾಡುತ್ತಿದ್ದಾರೆ. ಹಡಗು ಯಾವಾಗ ಮುಳುಗುತ್ತೋ ತಿಳಿದಿಲ್ಲ. ಹಾಗಾಗಿ ಯಾರಾದರೂ ರಕ್ಷಣೆ ಮಾಡಿ ಎಂದು ಕೈಚಾಚುತ್ತಿದ್ದಾರೆ" ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ಮಾತನಾಡಿದ ಅವರು, "ಇಂದು ಕಾಂಗ್ರೆಸ್ ಮುಳುಗುವ ಪಕ್ಷವಾಗಿದ್ದು, ಹತ್ತುವ ಜನ ಯಾರೂ ಇಲ್ಲ. ಹಾಗಾಗಿ ಯಾವ ಪಕ್ಷದಲ್ಲಿದ್ದರೂ ಒಂದು ಬಾರಿ ನಮ್ಮನ್ನು ರಕ್ಷಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ" ಎಂದಿದ್ದಾರೆ.
ಯೋಗೇಶ್ವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಅವರು ಯಾವ ರೀತಿಯಾದ ಭಾವನೆಯಲ್ಲಿ ಮಾತನಾಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಅದರ ವಿವರಣೆಯನ್ನು ಕೇಳುತ್ತೇನೆ. ಮಾಧ್ಯಮಗಳ ಮುಂದೆ ನಮ್ಮ ಸರ್ಕಾರ, ನಮ್ಮ ಮಂತ್ರಿಗಳು ಹಾಗೂ ಶಾಸಕರು ಮಾತನಾಡಬಾರದು. ಜನರ ಪ್ರಾಣ ರಕ್ಷಣೆಯ ಕೆಲಸ ಮಾಡಲು ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದಾರೆ. ಯೋಗೇಶ್ವರ್ ಏನು ಹೇಳಿದ್ದಾರೆ ಎನ್ನುವ ವಿವರಣೆ ಪಡೆದುಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
"ಬಿಜೆಪಿಯಲ್ಲಿ ಸದ್ಯ ನಾಯಕತ್ವ ಬದಲಾವಣೆ ಹಾಗೂ ಸಿಎಂ ಬದಲಾವಣೆಯ ಬಗ್ಗೆ ಚರ್ಚೆ ಇಲ್ಲ. ಹಾದಿ-ಬೀದಿಯಲ್ಲಿ ನಾಯಕತ್ವದ ಚರ್ಚೆ ಮಾಡುವಂತದಲ್ಲ.ದಾರಿಯಲ್ಲಿ ಮಾತನಾಡಿದರೆ ನಾಯಕತ್ವ ಬದಲಾವಣೆ ಆಗುವುದಿಲ್ಲ. ಇದಕ್ಕಾಗಿ ಶಾಸಕಾಂಗ ಸಭೆ ಕರೆಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ-ಕಾರ್ಯಗಳಿಗೆ ಜನರು ಆಶೀರ್ವದಿಸಿದ್ದಾರೆ.ಇವರ ದುರಹಂಕಾರದ ಕಾರಣದಿಂದ ಲೋಕಸಭೆಯಲ್ಲಿ ವಿರೋಧ ಪಕ್ಷದ ಯೋಗ್ಯತೆಯನ್ನೂ ಕೊಟ್ಟಿಲ್ಲ. ಈ ಬಗ್ಗೆ ಅರಿತು ಮಾತನಾಡಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ನಿವಾಸದ ಹಿಂದೆ ನೂರಾರು ಕೋಟಿ ವ್ಯವಹಾರ ನಡೆಯುತ್ತದೆ ಎನ್ನುವ ಯತ್ನಾಳ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, "ಯತ್ನಾಳ್ ಅವರ ಹೇಳಿಕೆಗೆ ನಾನು ಹೆಚ್ಚು ಗೌರವ ಕೊಡಲಾರೆ" ಎಂದಿದ್ದಾರೆ.
ಮೇಕೆದಾಟು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಬಗ್ಗೆ ಸಿಎಂ ಅವರು ಏನು ಮಾಡಬೇಕೊ ಅದನ್ನು ಮಾಡಿದ್ದಾರೆ. ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ಸ್ಪಷ್ಟವಾದ ಧೋರಣೆ ತೋರಿದೆ" ಎಂದು ತಿಳಿಸಿದ್ದಾರೆ.