ನವದೆಹಲಿ, ಜು.05 (DaijiworldNews/HR): "ಅಮಾಯಕ ಮುಸ್ಲಿಮರಿಗೆ ಹಿಂಸೆ ನೀಡಿರುವ ಬಿಜೆಪಿ ನಾಯಕರನ್ನು ಹುದ್ದೆಗಳಿಂದ ವಜಾಗೊಳಿಸಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಆರಂಭವಾಗಬೇಕು" ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಒತ್ತಾಯಿಸಿದ್ದಾರೆ.
ಘಜಿಯಾಬಾದ್ದಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ 'ಹಿಂದೂಸ್ತಾನ ಫಸ್ಟ್, ಹಿಂದೂಸ್ತಾನಿ ಬೆಸ್ಟ್' ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, "ಎಲ್ಲ ಭಾರತೀಯರ ಡಿಎನ್ಎ ಒಂದೇ. 'ಗೋವು ಪವಿತ್ರ ಪ್ರಾಣಿ. ಆದರೆ, ಗುಂಪು ಹತ್ಯೆ ಮಾಡುವುದು ಹಿಂದುತ್ವಕ್ಕೆ ವಿರುದ್ಧವಾಗಿದೆ. ಕೆಲವು ಸಂದರ್ಭಗಳಲ್ಲಿ ಗುಂಪು ಹತ್ಯೆಯ ಸುಳ್ಳು ಪ್ರಕರಣಗಳನ್ನು ಕೆಲವರ ವಿರುದ್ಧ ದಾಖಲಿಸಲಾಗಿದೆ" ಎಂದು ಹೇಳಿದ್ದರು.
ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ದಿಗ್ವಿಜಯ್ ಸಿಂಗ್, "ಭಾಗವತ್ ಅವರು ಮೊದಲಿಗೆ ತಮ್ಮ ಹೇಳಿಕೆಗೆ ಬದ್ಧರಾಗಿ ಬಿಜೆಪಿ ನಾಯಕರಿಗೆ ನಿರ್ದೇಶನ ನೀಡಬೇಕು. ಅಮಾಯಕ ಮುಸ್ಲಿಮರಿಗೆ ಹಿಂಸೆ ನೀಡಿರುವ ಬಿಜೆಪಿ ನಾಯಕರನ್ನು ಅವರ ಹುದ್ದೆಗಳಿಂದ ಕೆಳಗಿಳಿಸಬೇಕು. ಆದರೆ, ಭಾಗವತ್ ಅವರು ನಿರ್ದೇಶನ ನೀಡುವುದಿಲ್ಲ. ಅವರ ಮಾತಿಗೂ ಮತ್ತು ಕೃತಿಗೂ ಅಂತರವಿದೆ" ಎಂದಿದ್ದಾರೆ.
ಇನ್ನು "ಭಾಗವತ್ ಜೀ ನಿಮ್ಮ ಅಭಿಪ್ರಾಯಗಳನ್ನು ಅನುಯಾಯಿಗಳಿಗೂ ತಿಳಿಸುತ್ತೀರಾ? ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರಿಗೂ ಹೇಳುವಿರಾ? ಮೋದಿ ಮತ್ತು ಶಾ ಹಾಗೂ ಬಿಜೆಪಿ ಮುಖ್ಯಮಂತ್ರಿಗಳಿಗೂ ತಿಳಿಸುತ್ತೀರಾ" ಎಂದು ಪ್ರಶ್ನಿಸಿದ್ದಾರೆ.