ಚಿಕ್ಕಮಗಳೂರು, ಜು 05 (DaijiworldNews/PY): "ಕಾಂಗ್ರೆಸ್ ಪಕ್ಷದಲ್ಲಿ ಇದ್ದವರಿಗೇ ನೆಲೆ ಇಲ್ಲ. ಇನ್ನು ಬೇರೆಯವರು ಸೇರುವ ಬಗ್ಗೆ ಹಗಲುಗನಸು ಕಾಣುತ್ತಿದ್ದಾರೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಉರಿಯುವ ಮನೆ ಎಂದು ಅಂಬೇಡ್ಕರ್ ಹೇಳಿದ್ದರು. ಅಲ್ಲಿಗೆ ಹೋದವರನ್ನು ಭಸ್ಮ ಮಾಡುತ್ತದೆ ಎಂಬುದು ಅವರ ಉದ್ದೇಶ. ಕಾಂಗ್ರೆಸ್ನಲ್ಲಿ ಇದ್ದವರಿಗೆ ನೆಲೆ ಇಲ್ಲದಂತಾಗಿದೆ. ಇನ್ನು ಬೇರೆಯವರು ಬರುವ ಹಗಲುಗನಸು ಕಾಣುತ್ತಿದ್ದಾರೆ" ಎಂದಿದ್ದಾರೆ.
"ದೇಶದ ಉದ್ದಗಲಕ್ಕೂ ಹಲವು ಮಂದಿ ಕಾಂಗ್ರೆಸ್ ಪಕ್ಷ ಬಿಡುತ್ತಿದ್ದಾರೆ. ಇನ್ನು ಯಾರು ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಾರೆ?. ಸದ್ಯ ಬಿಜೆಪಿ ಅಧಿಕಾರದಲ್ಲಿದೆ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಸಿಎಂ ಸ್ಥಾನಕ್ಕೆ ಹೊಡೆದಾಟ ನಡೆಯುತ್ತಿರುವಾಗ ಅಲ್ಲಿಗೆ ಯಾರು ಹೋಗುತ್ತಾರೆ. ಯಾರೇ ಆದರೂ ಇರುಳು ಕಂಡ ಬಾವಿಗೆ ಹಗಲು ಬೀಳುವುದಿಲ್ಲ" ಎಂದು ಹೇಳಿದ್ದಾರೆ.
"ಬಿಜೆಪಿ ಪಕ್ಷಕ್ಕೆ ಬಂದಿರುವವರು ಕಾಂಗ್ರೆಸ್ ಬೇಡ ಎಂದೇ ಬಂದಿದ್ದಾರೆ. ಅಂತವರು ಮತ್ತೆ ಏಕೆ ಕಾಂಗ್ರೆಸ್ಗೆ ಹೋಗುತ್ತಾರೆ?. ಕಾಂಗ್ರೆಸ್ನ ಹಲವು ಮಂದಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ" ಎಂದು ತಿಳಿಸಿದ್ದಾರೆ.