ಬೆಂಗಳೂರು, ಜು 05 (DaijiworldNews/MS): ಕೊರೊನಾ ಕಾರಣದಿಂದಾಗಿ ಮೊದಲ ಬಾರಿಗೆ ದ್ವಿತೀಯ ಪಿಯು ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳನ್ನು ಹಿಂದಿನ ತರಗತಿಯ ಅಂಕಗಳನ್ನು ಆಧರಿಸಿ ರಾಜ್ಯ ಸರ್ಕಾರ ಪರೀಕ್ಷೆ ಇಲ್ಲದೆಯೇ ಪಾಸ್ ಮಾಡಿತ್ತು. ಆದರೆ ರಿಪೀಟರ್ಸ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು ಎಂದು ಸೂಚಿಸಿತ್ತು. ಇದೀಗ ಸರ್ಕಾರ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿದ್ದು, ಈ ವರ್ಷ ದ್ವಿತೀಯ ಪಿಯು ಪುನರಾವರ್ತಿತ (ರಿಪೀಟರ್ಸ್) ಅಭ್ಯರ್ಥಿಗಳಿಗೂ ಪರೀಕ್ಷೆ ಇಲ್ಲದೆ ಪಾಸ್ ಮಾಡಲಾಗುವುದು ಎಂದು ತಿಳಿಸಿದೆ.
ಪಿಯುಸಿ ಫ್ರೆಶರ್ಸ್ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ಬಳಿಕ ರಿಪೀಟರ್ಸ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು ಎಂಬ ಸರ್ಕಾರದ ತೀರ್ಮಾನದ ವಿರುದ್ದ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನಲೆಯಲ್ಲಿ ಹೈಕೋರ್ಟ್ ಸರ್ಕಾರವನ್ನು ತರಾಟೆಗೆತ್ತಿಕೊಂಡಿತ್ತು. ನ್ಯಾಯಾಲಯದ ಅಣತಿಯಂತೆ ಪಿಯು ಬೋರ್ಡ್ ಸಮಿತಿಯನ್ನು ರಚಿಸಿ ತೀರ್ಮಾನ ಕೈಗೊಂಡಿದ್ದು, ದ್ವಿತೀಯ ಪಿಯುಸಿ ರಿಪೀರ್ಟ್ ಗಳಿಗೆ ಪರೀಕ್ಷೆ ಇಲ್ಲದೇ ಶೇ. 35 ರಷ್ಟು ಅಂಕಗಳೊಂದಿಗೆ ಪಾಸ್ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಸರ್ಕಾರ ದ್ವಿತೀಯ ಪಿಯುಸಿಯ 5.86 ಲಕ್ಷ ಹೊಸ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸು ಮಾಡಿದೆ. ಈಗ ಈ ಪಟ್ಟಿಗೆ ಇನ್ನೂ ಒಂದು ಲಕ್ಷದಷ್ಟು ವಿದ್ಯಾರ್ಥಿಗಳು ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಅವಕಾಶ ಒಟ್ಟು 6.86 ಲಕ್ಷ ವಿದ್ಯಾರ್ಥಿಗಳಿಗೆ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.