ಬೆಂಗಳೂರು, ಜು 05 (DaijiworldNews/PY): ಕೆಆರ್ಎಸ್ ಸೋರುತ್ತಿದ್ದರೆ ಸುಮಲತಾ ಅವರನ್ನು ಅಡ್ಡ ಮಲಗಿಸಬೇಕು ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಸುಮಲತಾ ಅವರು ತಿರುಗೇಟು ನೀಡಿದ್ದು, "ಹೆಣ್ಣುಮಕ್ಕಳ ಬಗ್ಗೆ ಕೀಳುಮಟ್ಟದ ಹೇಳಿಕೆ ಕುಮಾರಸ್ವಾಮಿ ಅವರ ಸಂಸ್ಕೃತಿ, ವ್ಯಕ್ತಿತ್ವವನ್ನು ತೋರಿಸುತ್ತದೆ" ಎಂದು ಆಕ್ರೋಶ ವ್ಯಕ್ತಪಡಿದ್ದಾರೆ.
ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ, "ಓರ್ವ ಮಾಜಿ ಸಿಎಂ ಆಗಿ, ಈ ರಾಜ್ಯದ ಜನಪ್ರಿಯ ರಾಜಕಾರಣಿಯಾಗಿ ಈ ರೀತಿ ಮಾತುಗಳನ್ನು ಆಡುವುದು ಶೋಭೆತರುವುದಿಲ್ಲ" ಎಂದು ಕಿಡಿಕಾರಿದ್ದಾರೆ.
"ಕೆಆರ್ಎಸ್ ಜಲಾಶಯದ ರಕ್ಷಣೆ ನನ್ನ ಉದ್ದೇಶ. ನನಗೆ ಬಂದ ಮಾಹಿತಿಯ ಪ್ರಕಾರ ಜಲಾಶಯದ ಉಳಿವಿಗಾಗಿ ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ. ಈ ಬಗ್ಗೆ ಕುಮಾರಸ್ವಾಮಿ ಅವರ ಮಾತುಗಳನ್ನು ಕೇಳಿ ನಾನು ಕೆಲಸ ಮಾಡಬೇಕಿಲ್ಲ" ಎಂದಿದ್ದಾರೆ.
"ಕುಮಾರಸ್ವಾಮಿ ಅವರ ಹೇಳಿದಂತೆ ಮಂಡ್ಯ ಜಿಲ್ಲೆ ಈ ಹಿಂದೆ ನನ್ನಂತ ಸಂಸದೆಯನ್ನು ಕಂಡಿಲ್ಲ. ಕಾರಣ, ನನ್ನಂತ ನೇರವಂತಿಕೆ ಹಾಗೂ ಭ್ರಷ್ಟಾಚಾರದ ಬಗ್ಗೆ ನೇರವಾಗಿ ಮಾತನಾಡುತ್ತಿರುವುದು ಅವರಿಗೆ ಆಗುತ್ತಿಲ್ಲ. ನಾನು ನನ್ನ ಕೆಲಸ ಹಾಗೂ ಜವಾಬ್ದಾರಿಯನ್ನು ಮಾಡುತ್ತೇನೆ. ಚುನಾವಣೆಯ ಸಮಯದಿಂದಲೂ ಅವರ ಸಂಸ್ಕೃತಿ-ಸಂಸ್ಕಾರ ಏನು ಎನ್ನವುದು ಜನರಿಗೂ ತಿಳಿದಿದೆ" ಎಂದು ಹೇಳಿದ್ದಾರೆ.
"ಎರಡು ಬಾರಿ ಸಿಎಂ ಆದವರು, ಗೌರವಾನ್ವಿತ ಸ್ಥಾನದಲ್ಲಿರುವ ಹಿರಿಯರು ಹೆಣ್ಣುಮಕ್ಕಳ ಬಗ್ಗೆ ಈ ರೀತಿಯಾಗಿ ಮಾತನಾಡುವುದು ಸೂಕ್ತವೇ?. ಹೆಣ್ಣುಮಕ್ಕಳ ಬಗ್ಗೆ ಅವರಿಗಿರುವ ಗೌರವ ಎಷ್ಟಿದೆ ಎಂದು ತಿಳಿಯುತ್ತದೆ. ಇಂತ ರಾಜಕಾರಣಿಗಳಿಂದಾಗಿ ಮಂಡ್ಯ ಜಿಲ್ಲೆ ಅಭಿವೃದ್ದಿಗೆ ಮಾರಕವಾಗುತ್ತದೆ. ಇದರಿಂದ ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಲ್ಲದೇ ನನ್ನ ಕೆಲಸಕ್ಕೂ ಯಾವುದೇ ಅಡ್ಡಿಯಾಗುವುದಿಲ್ಲ. ಜನ ಅವರಿಗೆ ಬುದ್ದಿ ಕಲಿಸುತ್ತಾರೆ" ಎಂದಿದ್ದಾರೆ.
"ಕೆಆರ್ಎಸ್ ಜಲಾಶಯ ಸೋರಿಕೆಯಾಗುತ್ತಿದ್ದರೆ ನೀರು ಹೋಗದಂತೆ ಸುಮಲತಾ ಅವರನ್ನು ಅಡ್ಡ ಮಲಗಿಸಬೇಕು" ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.
"ಯಾವುದೋ ಅನುಕಂಪದಲ್ಲಿ ಅವರು ಆಯ್ಕೆಯಾಗಿದ್ದಾರೆ. ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿ. ಸಂಸದರು ಯಾವ ರೀತಿಯಾಗಿ ಕೆಲಸ ಮಾಡಬೇಕು ಎಂದು ಮಾಹಿತಿ ಪಡೆಯುವುದಿಲ್ಲ. ಕಾಟಾಚಾರಕ್ಕೆ ಯಾರದೋ ಮೇಲಿನ ದ್ವೇಷಕ್ಕೆ ಹೇಳಿಕೆ ನೀಡುವುದು ಸರಿಯಲ್ಲ" ಎಂದಿದ್ದರು.