ಬೆಂಗಳೂರು, ಜು 05 (DaijiworldNews/MS): ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಮುಂದಿನ ಮುಖ್ಯಮಂತ್ರಿ ಕಿತ್ತಾಟ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಣದ ನಡುವೆ ನಡೆಯುತ್ತಿರುವ ಕಿತ್ತಾಟದ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ "ಎತ್ತು ಏರಿಗೆ, ಕೋಣ ನೀರಿಗೆ, ಕಾಂಗ್ರೆಸ್ ಬೀದಿಗೆ!" ಎಂದು ವ್ಯಂಗ್ಯವಾಡಿದೆ.
ಈ ಬಗ್ಗೆ ರಾಜ್ಯ ಬಿಜೆಪಿಯೂ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, "ಪ್ರಳಯ ಆದರೂ ಪಕ್ಷ ಬಿಟ್ಟು ಹೋದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲಎನ್ನುವ ಸಿದ್ದರಾಮಯ್ಯ, ನಾನು ಅಧ್ಯಕ್ಷನಾಗಿ ಹೇಳುತ್ತಿದ್ದೇನೆ, ಪಕ್ಷ ಸೇರುವವರು ಅರ್ಜಿ ಸಲ್ಲಿಸಿ ಎನ್ನುವ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಗಮನಿಸಿದರೆ ಎತ್ತು ಏರಿಗೆ, ಕೋಣ ನೀರಿಗೆ, ಕಾಂಗ್ರೆಸ್ ಬೀದಿಗೆ" ಎಂದು ಹೇಳುವ ಮೂಲಕ ಕುಹಕವಾಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ನಡೆದು ವರ್ಷ ತುಂಬುತ್ತಿದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೂ ಈಗ ಬಣ ರಾಜಕಾರಣದ ಗೂಡಾಗಿದೆ. ವಲಸೆ ನಾಯಕರು ಪ್ರಾಬಲ್ಯ ಮೆರೆಯುತ್ತಿರುವುದು ಮೂಲ ಕಾಂಗ್ರೆಸ್ಸಿಗರಿಗೆ ನುಂಗಲಾರದ ತುತ್ತಾಗಿದೆ. ದುರ್ಬಲ ಅಧ್ಯಕ್ಷ ಮತ್ತು ನೂರಾರು ಸಿಎಂ ಆಕಾಂಕ್ಷಿಗಳು, ಇದು ಕಾಂಗ್ರೆಸ್ ಕಥೆ! ಎಂದು ಲೇವಡಿ ಮಾಡಿದೆ.
ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವಿನ ಕಲಹ ಯಾವ ಹಂತಕ್ಕೆ ತಲುಪಿದೆ ಎಂದರೆ ಇವರಿಂದಾಗಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವೂ ಎಐಸಿಸಿ ರಾಷ್ಟ್ರೀಯ ಅಧಕ್ಷ ಸ್ಥಾನದಂತೆ ಚಂಚಲವಾಗಿದೆ.ಇಬ್ಬರು ಆಕಾಂಕ್ಷಿಗಳು ಇಬ್ಬರು ನಾಯಕರ ಹಿಂದೆ ಜೋತು ಬಿದ್ದಿದ್ದಾರೆ. ಆ ಇಬ್ಬರು ನಾಯಕರು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ ಎಂದು ಹೇಳಿದೆ.