ಮೈಸೂರು, ಜು 05 (DaijiworldNews/PY): "ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಧೂಳಿಗೂ ಸಮನಾಗಿಲ್ಲದವರು ಅವರನ್ನು ಟೀಕಿಸುತ್ತಿದ್ದಾರೆ. ಬಿಎಸ್ವೈ ಅವರ ನಾಯಕತ್ವ ಹಾಗೂ ಪರಿಶ್ರಮ ಎಂತದ್ದು ಎನ್ನುವ ಬಗ್ಗೆ ಅರಿತುಕೊಂಡು ಮಾತನಾಡಲಿ" ಎಂದು ಸಚಿವ ಎಸ್.ಟಿ.ಸೋಮಶೇಖರ್ ಕಿಡಿಕಾರಿದ್ದಾರೆ.
ಮೈಸೂರಿನ ಸುತ್ತೂರು ಮಠದಲ್ಲಿ ಮಾತನಾಡಿದ ಅವರು, "ನಮ್ಮಿಂದ ಸರ್ಕಾರ ಬಂದಿದೆ ಎಂದಿ ಕೆಲವರು ಪದೇ ಪದೇ ಹೇಳುತ್ತಿದ್ದಾರೆ. ಈ ಸರ್ಕಾರ ಅವರಿಂದ ಬಂದಿಲ್ಲ. ಬಿಎಸ್ವೈ ಅವರ ನಾಯಕತ್ವದಲ್ಲಿ 14 ಶಾಸಕರು ಜಯ ಗಳಿಸಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ನ ನಾವು 17 ಮಂದಿ ಅವರೊಂದಿಗೆ ಬಂದಿದ್ದೇವೆ. ಬಿಎಸ್ವೈ ಅವರ ನೇತೃತ್ವದಲ್ಲಿ 104 ಮಂದಿ ಗೆಲ್ಲದೇ ಇರುತ್ತಿದ್ದರೆ ಸರ್ಕಾರ ಮಾಡಲು ಸಾಧ್ಯವಿತ್ತೇ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾವು ಇವರು ಯಾರನ್ನೂ ನಂಬಿಕೊಂಡು ಸರ್ಕಾರ ಮಾಡಿಲ್ಲ. ಬಿಎಸ್ವೈ ಬಗ್ಗೆ ಇವರಿಗೆ ಅಸಮಾಧಾನವಿದ್ದಲ್ಲಿ ಶಾಸಕಾಂಗ ಸಭೆಯಲ್ಲಿ ಮಾತನಾಡಲಿ. ಅದುಬಿಟ್ಟು ಹಾದಿ ಬೀದಿಯಲ್ಲಿ ಮಾತನಾಡುವುದು ಸೂಕ್ತವಲ್ಲ" ಎಂದಿದ್ದಾರೆ.
"ಬಿಎಸ್ವೈ ಬಗ್ಗೆ ಮಾತನಾಡುವವರು ಏಕೆ ಚುನಾವಣೆಯಲ್ಲಿ ಸೋತಿದ್ದಾರೆ?. ಪ್ರತಿ ನಿತ್ಯ ಯಡಿಯೂರಪ್ಪ ಅವರನ್ನು ಟೀಕೆ ಮಾಡುವುದೇ ಇವರ ಕಾರ್ಯವಾಗಿದೆ. ಯಡಿಯೂರಪ್ಪ ಅವರ ಸಮಕ್ಕೆ ಇರುವವರು ಮತನಾಡಿದ್ದರೆ ಅದಕ್ಕೊಂದು ಬೆಲೆ ಇರುತ್ತದೆ" ಎಂದು ಹೇಳಿದ್ದಾರೆ.