ಮಂಡ್ಯ, ಜು 05 (DaijiworldNews/PY): ಜೊತೆಯಲ್ಲೇ ಹುಟ್ಟು ಬೆಳೆದ ಅವಳಿ ಸಹೋದರಿಯರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಶ್ರೀರಂಗಪಟ್ಟಣ ತಾಲೂಕಿನ ಹಣಸನಹಳ್ಳಿ ಗ್ರಾಮದ ನಿವಾಸಿಗಳಾದ ಸುರೇಶ್ ಮತ್ತು ಯಶೋದ ದಂಪತಿಯ ಅವಳಿ ಪುತ್ರಿಯರಾದ ದೀಪಿಕಾ ಹಾಗೂ ದಿವ್ಯಾ (19) ಎನ್ನಲಾಗಿದೆ. ಇಬ್ಬರು ಪ್ರತ್ಯೇಕ ಕೊಠಡಿಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವಳಿ ಸಹೋದರಿಯರು ಚಿಕ್ಕಂದಿನಿಂದ ಬಹಳ ಅನ್ಯೋನ್ಯತೆಯಿಂದಿದ್ದರು. ಪೋಷಕರು ಇಬ್ಬರನ್ನೂ ಬೇರೆ ಬೇರೆ ಮನೆಗೆ ವಿವಾಹ ಮಾಡಿಕೊಡಲು ಇಚ್ಛಿಸಿದ್ದರು. ಬೇರೆ ಬೇರೆ ಮನೆಗೆ ವಿವಾಹವಾಗಿ ಹೋಗುವುದನ್ನು ಊಹಿಸಿಕೊಳ್ಳಲು ಸಾಧ್ಯವಾಗದ ಅವಳಿ ಸಹೋದರಿಯರು ಮನೆಯ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಘಟನೆಯ ಬಗ್ಗೆ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.