ಬೆಂಗಳೂರು, ಜು 05 (DaijiworldNews/MS): ರಾಜ್ಯದಲ್ಲಿ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದಲ್ಲಿ ಇರುವವರು ಲೂಟಿಗೆ ಇಳಿದಿದ್ದು, ಭ್ರಷ್ಟಾಚಾರದ ದುಡ್ಡು ವಿರೋಧ ಪಕ್ಷದವರಿಗೂ ಹೋಗುತ್ತಿರುವ ಕಾರಣ ವಿರೋಧಪಕ್ಷದವರು ಯಾವುದನ್ನು ಪ್ರಶ್ನಿಸುತ್ತಿಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಚಾಮುಂಡೇಶ್ವರಿಯ ದರ್ಶನ ಪಡೆದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಯತ್ನಾಳ್ , " ದೇವರಲ್ಲಿ ದುಷ್ಟರನ್ನು ನಾಶಮಾಡುವಂತೆ ಪ್ರಾರ್ಥನೆ ಮಾಡಿದ್ದೇನೆ. ರಾಜ್ಯವನ್ನು ಲೂಟಿ ಮಾಡುತ್ತಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದು ಬಿಜೆಪಿ ಉಳಿಯಬೇಕಾದರೆ ಬದಲಾವಣೆ ಆಗಬೇಕಿದೆ. ವಿರೋಧಪಕ್ಷದವರು ವ್ಯವಹಾರದಲ್ಲಿ ಪಾಲುದಾರರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಲಿಂಗಾಯಿತರು ತಲೆತಗ್ಗಿಸುವ ರೀತಿಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಯುತ್ತಿದೆ. ದಕ್ಷಿಣೆ ಕೊಟ್ಟಿದ್ದಕ್ಕೆ ಮಠಾಧೀಶರು ಸಿಎಂ ಪರವಾಗಿ ಮಾತನಾಡುತ್ತಿದ್ದಾರೆ. ಮಠಗಳು ಧರ್ಮಕಾರ್ಯಗಳನ್ನು ಮಾಡಬೇಕು. ಅದು ಬಿಟ್ಟು ರಾಜಕೀಯ ಪಕ್ಷಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಕಚೇರಿಯಲ್ಲಿಯೇ ಎಲ್ಲಾ ವ್ಯವಹಾರ ನಡೆಯುತ್ತಿದ್ದು, ಒಂದು ದಿನಕ್ಕೆ 100 ಕೋಟಿ ರೂಪಾಯಿ ಲೂಟಿಯಾಗುತ್ತಿದೆ. ಸಚಿವ ಶ್ರೀರಾಮುಲು ಅವರನ್ನು ಮುಗಿಸಲು ಪ್ರಯತ್ನಿಸಲಾಗುತ್ತಿದೆ. ಕಾಂಗ್ರೆಸ್ ನವರು ಮುಖ್ಯಮಂತ್ರಿ ಯಡಿಯೂರಪ್ಪನವರ ಎಂಜಲು ತಿಂದು ಬದುಕುತ್ತಿದ್ದಾರೆ ಎಂದು ಟೀಕಿಸಿದ್ದು, ಎರಡು ದಿನಗಳಲ್ಲಿ ಇದಕ್ಕೆ ಸಂಬಂಧಿಸಿದ ದಾಖಾಲೆಗಳನ್ನು ಮಾಧ್ಯಮದವರಿಗೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.