ನವದೆಹಲಿ, ಜು.02 (DaijiworldNews/HR): ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವ ಕೇರಳ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸಗಡ ಮತ್ತು ಮಣಿಪುರ ಸೇರಿ ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರವು ತಜ್ಞರ ತಂಡಗಳನ್ನು ನಿಯೋಜಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, "ಈ ತಂಡಗಳು ಕೊರೊನಾ ನಿರ್ವಹಣೆಯಲ್ಲಿ ರಾಜ್ಯಗಳಿಗೆ ಸಹಾಯ ಮಾಡಲಿದ್ದು, ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ನೆರವಾಗಲಿದೆ" ಎಂದು ತಿಳಿಸಿದೆ.
ಇನ್ನು ಇಬ್ಬರು ಸದಸ್ಯರ ಉನ್ನತ ಮಟ್ಟದ ತಂಡವು ವೈದ್ಯ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡಿದೆ ಎನ್ನಲಾಗಿದೆ.
ರಾಜ್ಯಗಳಿಗೆ ಭೇಟಿ ನೀಡಲಿರುವ ಕೇಂದ್ರ ತಂಡವು, ಕೊರೊನಾ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲಿದ್ದು, ಸೂಕ್ತ ಕ್ರಮವನ್ನು ಸೂಚಿಸಲಿದೆ. ಸೋಂಕಿತರ ಪರೀಕ್ಷೆ, ಕಂಟೋನ್ಮೆಟ್ ವಲಯ, ಕೊರೊನಾ ನಿರ್ವಹಣೆ ಮತ್ತು ಅದರ ಜಾರಿ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ, ಆಂಬ್ಯುಲೆನ್ಸ್, ವೆಂಟಿಲೇಟರ್, ವೈದ್ಯಕೀಯ ಆಮ್ಲಜನಕ ಪೂರೈಕೆ ಸೇರಿದಂತೆ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮವನ್ನು ಮೇಲ್ವಿಚಾರಣೆ ನಡೆಸಲಿದೆ ಎಂದು ತಿಳಿದು ಬಂದಿದೆ.